ಸಂಘಪರಿವಾರದ ‘ಮೂಲ ಮಂದಿರ ಚಲೋ’ ಹಿನ್ನೆಲೆ; ಜೂ.3ರಿಂದ 5ರವರೆಗೆ ಶ್ರೀರಂಗಪಟ್ಟಣದಲ್ಲಿ ನಿಷೇಧಾಜ್ಞೆ

ಮಂಡ್ಯ, ಜೂ.2: ಮೂಡಲಬಾಗಿಲು ಆಂಜನೇಯನ ದೇವಾಲಯವಾಗಿದ್ದ ಶ್ರೀರಂಗಪಟ್ಟಣದ ಜಾಮಿಯಾ ಮಸೀದಿಯಲ್ಲಿ ಹನುಮನ ಪೂಜೆಗೆ ಅವಕಾಶ ನೀಡಲು ಒತ್ತಾಯಿಸಿ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳ ಜೂ.4ರಂದು ಹಮ್ಮಿಕೊಂಡಿರುವ ‘ಮೂಲ ಮಂದಿರ ಚಲೋ’ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಶ್ರೀರಂಗಪಟ್ಟಣ ವ್ಯಾಪ್ತಿಯಲ್ಲಿ ಸಿಆರ್‍ಪಿಸಿ ಕಲಂ 144ರ ಅನ್ವಯ ನಿಷೇದಾಜ್ಞೆ ಜಾರಿಗೊಳಿಸಲಾಗಿದೆ.
ಜೂ.3ರ ಸಂಜೆ 6 ಗಂಟೆಯಿಂದ ಜೂ.5ರ ಬೆಳಗ್ಗೆ 12 ಗಂಟೆವರೆಗೆ ಮೈಸೂರು ರಸ್ತೆಯ ಬನ್ನಿಮಂಟಪ ವೃತ್ತದಿಂದ ನಿಮಿಷಾಂಭ ದೇವಸ್ಥಾನ ಗಂಜಾಂ ಸೇರಿದ ಹಾಗೆ ಪಶ್ಚಿಮವಾಹಿನಿಯಿಂದ ರೈಲ್ವೆ ನಿಲ್ದಾಣ ಒಳಗೊಂಡಂತೆ ಪೂರ್ವ ಪಶ್ಚಿಮವಾಹಿನಿ ಸೇರಿದಂತೆ ಶ್ರೀರಂಗಪಟ್ಟಣ ಟೌನ್ ಪುರಸಭೆ ವ್ಯಾಪ್ತಿಯನ್ನು ನಿಷೇದಿತ ಪ್ರದೇಶವೆಂದು ತಹಶೀಲ್ದಾರ್ ಹಾಗೂ ತಾಲೂಕು ದಂಡಾಧಿಕಾರಿ ಶ್ವೇತಾ ಎನ್.ರವೀಂದ್ರ ಆದೇಶ ಹೊರಡಿಸಿದ್ದಾರೆ.
ಶ್ರೀರಂಗಪಟ್ಟಣ ಆರಕ್ಷಕ ನಿರೀಕ್ಷಕರು ಸಲ್ಲಿಸಿರುವ ಪ್ರಸ್ತಾವನೆ ಹಿನ್ನೆಲೆಯಲ್ಲಿ ಕಾನೂನು ಸುವ್ಯವಸ್ಥೆ ಮತ್ತು ಶಾಂತಿ ಕಾಪಾಡುವ ಹಿತದೃಷ್ಟಿಯಿಂದ ಮುಂಜಾಗ್ರತಾ ಕ್ರಮವಾಗಿ ಯಾವುದೇ ರೀತಿಯ ಜಾಥ ಮತ್ತು ಪ್ರತಿಭಟನೆ ನಡೆಸದಂತೆ ನಿಷೇದಾಜ್ಞೆ ಹೊರಡಿಸುವುದು ಸೂಕ್ತವೆಂದು ಈ ಆದೇಶ ಮಾಡಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ. ನಿರ್ಬಂಧಿತ ಪ್ರದೇಶದಲ್ಲಿ 5ಕ್ಕಿಂತ ಹೆಚ್ಚು ಮಂದಿ ಸೇರುವಂತಿಲ್ಲ, ಧ್ವನಿವರ್ಧಕ ಬಳಸುವಂತಿಲ್ಲ, ಬಹಿರಂಗ ಘೋಷಣೆ, ಪ್ರಚೋದಾತ್ಮಕ ಭಾಷಣ ಮಾಡುವಂತಿಲ್ಲ. ಆದೇಶ ಉಲ್ಲಂಘಿಸಿದವರ ವಿರುದ್ಧ ಕಲಂ 188ರ ಪ್ರಕಾರ ಕ್ರಮ ಜರುಗಿಸಲಾಗುವುದು ಎಂದು ಆದೇಶದಲ್ಲಿ ಎಚ್ಚರಿಸಲಾಗಿದೆ.
ಮದ್ಯ ಮಾರಾಟ ನಿಷೇದ
ಜೂ.3ರ ಸಂಜೆ 6 ಗಂಟೆಯಿಂದ 5ರ ಬೆಳಗ್ಗೆ 6 ಗಂಟೆವರೆಗೆ ಶ್ರೀರಂಗಪಟ್ಟಣ ಪುರಸಭಾ ವ್ಯಾಪ್ತಿಯ 5 ಕಿ.ಮೀ. ಸುತ್ತಳತೆ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಮಾದರಿಯ ಮದ್ಯದ ಅಂಗಡಿ, ಬಾರ್, ಮತ್ತು ರೆಸ್ಟೋರೆಂಟ್‍ಗಳನ್ನು ಮುಚ್ಚುವಂತೆ ಹಾಗೂ ಮದ್ಯ ಮಾರಾಟ, ಸಂಗ್ರಹಣೆ, ಸಾಗಾಣಿಕೆ ಮತ್ತು ಶೇರಣೆ ಮಾಡುವುದನ್ನು ನಿಷೇದಿಸಿ ಜಿಲ್ಲಾ ದಂಡಾಧಿಕಾರಿ ಎಸ್.ಅಶ್ವತಿ ಆದೇಶ ಹೊರಡಿಸಿದ್ದಾರೆ.
ಸಂತೆ ಮುಂದೂಡಿಕೆ
ಶ್ರೀರಂಗಪಟ್ಟಣದಲ್ಲಿ ನಿಷೇದಾಜ್ಞೆ ಜಾರಿ ಇರುವುದರ ಹಿನ್ನೆಲೆಯಲ್ಲಿ ಜೂ.4ರಂದು ಶ್ರೀರಂಗಪಟ್ಟಣದಲ್ಲಿ ನಡೆಯುವ ವಾರದ ಸಂತೆಯನ್ನು ರದ್ದುಪಡಿಸಿ ಜೂ.5ಕ್ಕೆ ಮುಂದೂಡಲಾಗಿದೆ ಎಂದು ಶ್ರೀರಂಗಪಟ್ಟಣ ಪುರಸಭೆ ಮುಖ್ಯಾಧಿಕಾರಿ ತಿಳಿಸಿದ್ದಾರೆ.







