ಬಾಬಾಬುಡಾನ್‍ಗಿರಿ ದತ್ತಪೀಠ ವಿವಾದ: 6 ವಾರದಲ್ಲಿ ವರದಿಗೆ ಹೈಕೋರ್ಟ್ ಆದೇಶ

ಬೆಂಗಳೂರು, ಜೂ.2: ಚಿಕ್ಕಮಗಳೂರಿನ ಬಾಬಾಬುಡಾನ್‍ಗಿರಿ ದತ್ತಪೀಠದ ವಿವಾದ ಸಂಬಂಧ ಸೌಹಾರ್ದಯುತ ಪರಿಹಾರ ಕಂಡುಕೊಳ್ಳಲು ಹೈಕೋರ್ಟ್ ಸರಕಾರಕ್ಕೆ ಆರು ವಾರ ಕಾಲಾವಕಾಶ ನೀಡಿದೆ. ಜತೆಗೆ ಸಮಿತಿ ಕೈಗೊಳ್ಳುವ ನಿರ್ಣಯದ ವರದಿ ಸಲ್ಲಿಸಲು ಆದೇಶ ನೀಡಿದೆ.
ಬಾಬಾಬುಡನ್ ಗಿರಿ ಇನಾಂ ದತ್ತಾತ್ರೇಯ ಪೀಠದ ಪೂಜಾ ಕೈಂಕರ್ಯಕ್ಕಾಗಿ ಮುಜಾವರ್ ನೇಮಕ ಮಾಡಿ ಸರಕಾರ ಹೊರಡಿಸಿದ್ದ ಆದೇಶ ರದ್ದುಪಡಿಸಿ ಏಕಸದಸ್ಯಪೀಠ ನೀಡಿದ್ದ ತೀರ್ಪು ಪ್ರಶ್ನಿಸಿ ಸೈಯದ್ ಗೌಸ್ ಮೊಹಿಯುದ್ದೀನ್ ಷಾ ಖಾದ್ರಿ ಸಲ್ಲಿಸಿದ್ದ ಮೇಲ್ಮನವಿ ಕುರಿತು ಹೈಕೋರ್ಟ್ ವಿಭಾಗೀಯಪೀಠ ವಿಚಾರಣೆ ನಡೆಸಿತು. ಸರಕಾರವೇ ಈ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಿದೆ ಎಂದು ನ್ಯಾಯಪೀಠಕ್ಕೆ ತಿಳಿಸಿದ ಹಿನ್ನೆಲೆಯಲ್ಲಿ ಹೈಕೋರ್ಟ್ 6 ವಾರ ಸಮಯವನ್ನು ನೀಡಿದೆ.
ವಕೀಲರ ವಾದ ಆಲಿಸಿದ ನ್ಯಾಯಪೀಠ, ವಿಚಾರಣೆಯನ್ನು 6 ವಾರಗಳ ಮುಂದೂಡಿ ರಾಜ್ಯ ಸರಕಾರ ಸಲ್ಲಿಸುವ ನಿರ್ಣಯವು ಮೇಲ್ಮನವಿಯ ಅಂತಿಮ ಫಲಿತಾಂಶಕ್ಕೆ ಒಳಪಡಲಿದೆ. ಸರಕಾರದ ನಿರ್ಣಯದ ಬಗ್ಗೆ ಆಕ್ಷೇಪ ಎತ್ತಲು ಉಭಯ ಪಕ್ಷಗಾರರು ಮುಕ್ತರಾಗಿರುತ್ತಾರೆ. ವಿವಾದಿತ ಸ್ಥಳದಲ್ಲಿ ಈಗಿರುವ ಸ್ಥಿತಿಯಲ್ಲಿ ಏನಾದರೂ ಬದಲಾವಣೆಯಾದರೆ ಆ ಬಗ್ಗೆ ಸೂಕ್ತ ಮನವಿ ಸಲ್ಲಿಸಲು ಸ್ವತಂತ್ರರು ಎಂದು ನ್ಯಾಯಪೀಠ ಹೇಳಿದೆ.





