ಗ್ರಾಮೀಣ ಭಾಗದ ಸ್ವಯಂ ಸೇವಕರಿಗೆ ಪ್ರಥಮ ಚಿಕಿತ್ಸೆ ಅರಿವು ಅಗತ್ಯ: ಡಾ. ಕುಮಾರ್
ಕೊಣಾಜೆ: ಗ್ರಾಮೀಣ ಭಾಗದ ಸ್ವಯಂಸೇವಕರಿಗೆ ಪ್ರಥಮ ಚಿಕಿತ್ಸಾ ಕಾರ‍್ಯಗಾರದ ತಿಳುವಳಿಕೆ ನೀಡುವ ಕಾರ್ಯ ಮುಖ್ಯವಾದುದು. ಪ್ರತಿಯೊಬ್ಬರಲ್ಲೂ ಇಂತಹ ತಿಳುವಳಿಕೆ ದೊರೆತಲ್ಲಿ ಉತ್ತಮ ಎಂದು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಡಾ.ಕುಮಾರ್ ಐಎಎಸ್ ಅಭಿಪ್ರಾಯಪಟ್ಟರು.
ನಿಟ್ಟೆ ಉಷಾ ನರ್ಸಿಂಗ್ ವಿಜ್ಞಾನ ಸಂಸ್ಥೆ, ನಿಟ್ಟೆ ಇನೋವೇಷನ್ ಕೌನ್ಸಿಲ್ , ನಿಟ್ಟೆ ವೈದ್ಯಕೀಯ ಸಿಮ್ಯುಲೇಷನ್ ಕೇಂದ್ರ ಹಾಗೂ ಕ್ಷೇಮ ಅರಿವಳಿಕೆ ಶಾಸ್ತ್ರ ವಿಭಾಗ ಮತ್ತು ಕ್ರಿಟಿಕಲ್ ಕೇರ್ ವಿಭಾಗಗಳ ಆಶ್ರಯದಲ್ಲಿ ದೇರಳಕಟ್ಟೆಯ ಕ್ಷೇಮ ಆಸ್ಪತ್ರೆಯ ಚಿಂತನಾ ಸಭಾಂಗಣದಲ್ಲಿ ಬುಧವಾರ ಗ್ರಾಮೀಣ ಸ್ವಯಂಸೇವಕರಿಗೆ ಹಮ್ಮಿಕೊಳ್ಳಲಾದ ಪ್ರಥಮ ಚಿಕಿತ್ಸೆ ಹಾಗೂ ತುರ್ತು ಚಿಕಿತ್ಸಾ ತರಬೇತಿ ಕಾರ್ಯಾಗಾರ 'ಆಪತ್ಬಂಧು' ಇದರ ಸಮಾರೋಪ ಹಾಗೂ ಆರೋಗ್ಯ ಕಿಟ್ ವಿತರಣಾ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದರು.
ಮಾನವ ಜೀವ ರಕ್ಷಣೆ ಅಮೂಲ್ಯವಾದುದು. ಹೃದಯ ಹಾಗೂ ಮನಸ್ಸಿನಲ್ಲಿ ಶುದ್ಧತೆಯಿದ್ದಲ್ಲಿ ಮಾನವೀಯತೆಯಿಂದ ಮಾನವನ ಸೇವೆ ನಡೆಸಲು ಸಾಧ್ಯ. ಕೋವಿಡ್ ಸಂದರ್ಭ ಗ್ರಾ.ಪಂ ಸದಸ್ಯರು, ಆಶಾ ಕಾರ‍್ಯಕರ್ತೆಯರು ಅನೇಕ ರೀತಿಯಲ್ಲಿ ಸೇವೆ ಮಾಡಿರುವುದು ಶ್ಲಾಘನೀಯ ಎಂದರು.
ನಿಟ್ಟೆ ಸ್ವಾಯುತ್ತೆಗೊಳ್ಳಲಿರುವ ವಿಶ್ವವಿದ್ಯಾಲಯದ ಕುಲಪತಿ ಡಾ. ಬಿ. ಸತೀಶ್ ಕುಮಾರ್ ಭಂಡಾರಿ ಅಧ್ಯಕ್ಷತೆ ವಹಿಸಿ ಮಾತನಾಡಿ, ವಾಟ್ಸಾಪ್‌ನಲ್ಲಿ ಬರುವಂತಹ ಸಂದೇಶಗಳಲ್ಲಿ ದಾರಿತಪ್ಪುವ ಸಮಯದಲ್ಲಿ ನಿಟ್ಟೆ ವಿಶ್ವವಿದ್ಯಾಲಯ ಆರೋಗ್ಯದ ಕುರಿತು ಸಾಕ್ಷ್ಯ ಸಹಿತ ತಿಳುವಳಿಕೆ ಮೂಡಿಸುವ ಉದ್ದೇಶದಿಂದ ಆಪದ್ಬಂಧು ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಅಪಪತ್ಕಾಲದಲ್ಲಿ ಸಾಮಾಜಿಕ ಕರ್ತವ್ಯ ಹೇಗೆ ನಿಭಾಯಿಸಬಹುದು ಜ್ಞಾನವನ್ನು ಮೂಡಿಸುವ ಕರ‍್ಯವಾಗಿದೆ. ಅಪಘಾತಗಳು ಹೆಚ್ಚಾಗಿ ಸಂಭವಿಸುವಂತಹ ಸಮಯದಲ್ಲಿ ತರಬೇತಿ ಪಡೆದ ಸ್ವಯಂಸೇವಕರಿಂದ ಜೀವ ಉಳಿಸಲು ಸಾಧ್ಯ ಎಂದರು.
ಮುಖ್ಯ ಅತಿಥಿಗಳಾಗಿ ಕರಾವಳಿ ಕಾವಲು ಪಡೆಯ ಕಮಾಂಡರ್ ಎಸ್.ಬಿ ವೆಂಕಟೇಶ್, ನಿಟ್ಟೆ ಇನ್ನೊವೇಷನ್ ಸೆಲ್ ನಿರ್ದೇಶಕ ಡಾ.ಜಿ. ಶ್ರೀನಿಕೇತನ್, ಕಮ್ಯುನಿಟಿ ಹೆಲ್ತ್ ನರ್ಸಿಂಗ್ ವಿಭಾಗ ಮುಖ್ಯಸ್ಥೆ ಡಾ.ನೀತಾ ಕಾಮತ್ ಉಪಸ್ಥಿತರಿದ್ದರು.
ನಿಟ್ಟೆ ಉಷಾ ನರ್ಸಿಂಗ್ ಕಾಲೇಜು ಪ್ರಾಂಶುಪಾಲೆ ಡಾ. ಫಾತಿಮಾ ಡಿಸಿಲ್ವಾ ಸ್ವಾಗತಿಸಿದರು. ಜೀವಿತಾ ಆಳ್ವ ನಿರೂಪಿಸಿದರು. ಡಾ.ಸಬಿತಾ ನಾಯಕ್ ವಂದಿಸಿದರು.