ಚೀನಾ: ʼಲಾಕ್‌ಡೌನ್ʼ ಎಂಬ ಪದ ಬಳಸದಂತೆ ಮಾಧ್ಯಮಗಳಿಗೆ ಅಧಿಕಾರಿಗಳಿಂದ ಸೂಚನೆ
ಬೀಜಿಂಗ್, ಜೂ.3: ಪ್ರಮುಖ ವಾಣಿಜ್ಯ ನಗರ ಶಾಂಘೈಯಲ್ಲಿ 2 ತಿಂಗಳಾವಧಿಯ ಲಾಕ್ಡೌನ್ ಅಂತ್ಯಗೊಂಡಿರುವ ಬಗ್ಗೆ ವರದಿ ಮಾಡುವಾಗ ಲಾಕ್ಡೌನ್ ಎಂಬ ಪದವನ್ನು ಬಳಸಬಾರದು ಎಂದು ಮಾಧ್ಯಮಗಳಿಗೆ ಚೀನಾದ ಅಧಿಕಾರಿಗಳು ಸೂಚಿಸಿದ್ದಾರೆ.
ಶಾಂಘೈಯಲ್ಲಿ ಇತ್ತೀಚೆಗೆ ಲಾಕ್ಡೌನ್ ತೆರವುಗೊಳಿಸಲಾಗಿದ್ದು ಜನತೆ ಮನೆಯಿಂದ ಹೊರಗೆ ತೆರಳಲು ಮತ್ತು ಸಾರ್ವಜನಿಕ ಸಾರಿಗೆ ವ್ಯವಸ್ಥೆ ಬಳಸಲು ಅವಕಾಶ ನೀಡಲಾಗಿದ್ದು ವರ್ಕ್ ಫ್ರಂ ಹೋಮ್ ವ್ಯವಸ್ಥೆ ಮುಂದುವರಿಸಲು ಸೂಚಿಸಲಾಗಿದೆ. ಇದನ್ನು ವರದಿ ಮಾಡುವಾಗ ‘ಲಾಕ್ಡೌನ್ ಅಂತ್ಯ’ ಎಂಬ ಪದ ಬಳಸಬಾರದು ಎಂದು ಮಾಧ್ಯಮಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿರುವ ರಹಸ್ಯ ಆದೇಶ ಮಾಧ್ಯಮಗಳ ಮೂಲಕ ಸೋರಿಕೆಯಾಗಿದೆ.
ವುಹಾನ್ನಂತೆ, ಶಾಂಘೈಯಲ್ಲಿ ಯಾವತ್ತೂ ಲಾಕ್ಡೌನ್ ಘೋಷಿಸಿಲ್ಲ.
ಆದ್ದರಿಂದ ಲಾಕ್ಡೌನ್ ಅಂತ್ಯಗೊಳಿಸುವ ಪ್ರಶ್ನೆಯೇ ಇರುವುದಿಲ್ಲ. ಶಾಂಘೈಯ ಎಲ್ಲಾ ಭಾಗಗಳಲ್ಲಿ ಸ್ಥಿರ ನಿರ್ವಹಣೆ ರೀತಿಯ ನಿರ್ಬಂಧ ಮತ್ತು ನಿಗ್ರಹ ಜಾರಿಯಲ್ಲಿತ್ತು. ಆದರೂ ಈ ಅವಧಿಯಲ್ಲಿ ನಗರದ ಪ್ರಮುಖ ಕಾರ್ಯನಿರ್ವಹಣೆ ಈ ಹಿಂದಿನಂತೆಯೇ ಮುಂದುವರಿದಿತ್ತು. ಸಂಬಂಧಿತ ಕ್ರಮಗಳು ತಾತ್ಕಾಲಿಕ, ಷರತ್ತುಬದ್ಧ ಮತ್ತು ಸೀಮಿತ ಎಂದು ವರದಿಯಲ್ಲಿ ಒತ್ತಿಹೇಳಬೇಕು. ಜೂನ್ 1ರ ಪುನರಾರಂಭವೂ ಷರತ್ತು ಬದ್ಧವಾಗಿರುತ್ತದೆ. ಇಡೀ ಜಿಲ್ಲೆಯಲ್ಲಿ ಎಲ್ಲಾ ಜನರೂ ಏಕಕಾಲದಲ್ಲಿ ಮುಕ್ತವಾಗಿ ಸಂಚರಿಸಬಹುದು ಎಂದು ಇದರರ್ಥವಲ್ಲ. ವರದಿಯಲ್ಲಿ ಸಮಗ್ರ ಸಡಿಲಿಕೆ ಅಥವಾ ಸಹಜ ಸ್ಥಿತಿಗೆ ಮರಳಿದೆ ಎಂಬ ಪದವನ್ನು ಬಳಸಬಾರದು ಎಂದು ಆದೇಶದಲ್ಲಿ ಸೂಚಿಸಿರುವುದನ್ನು ಚೀನಾದ ಡಿಜಿಟಲ್ ಮಾಧ್ಯಮ ವರದಿ ಮಾಡಿದೆ.
ಕೆಲವೊಮ್ಮೆ ಆದೇಶಗಳು ಪತ್ರಕರ್ತರಿಗೆ ಹಾಗೂ ಸಂಪಾದಕರಿಗೆ ಮೌಖಿಕವಾಗಿ ರವಾನೆಯಾಗುತ್ತದೆ. ಇದನ್ನು ಮಾಧ್ಯಮಗಳು ಆನ್ಲೈನ್ನಲ್ಲಿ ಸೋರಿಕೆ ಮಾಡುವಾಗ ಆದೇಶದಲ್ಲಿ ಸೂಚಿಸಿದ ಪದವನ್ನೇ ಬಳಸುತ್ತವೆ ಎನ್ನಲಾಗದು. ಕೆಲವು ಸೂಚನೆಗಳನ್ನು ಸ್ಥಳೀಯ ಅಧಿಕಾರಿಗಳು ನಿರ್ದಿಷ್ಟ ಕ್ಷೇತ್ರಕ್ಕೆ ಮಾತ್ರ ನೀಡಿರಬಹುದು ಮತ್ತು ಇದನ್ನು ಚೀನಾದಾದ್ಯಂತ ಸಾರ್ವತ್ರಿಕವಾಗಿ ಅನ್ವಯಿಸುವಂತಿಲ್ಲ ಎಂದು ಚೀನಾ ಡಿಜಿಟಲ್ ಟೈಮ್ಸ್’ ಡಿಜಿಟಲ್ ಮಾಧ್ಯಮ ಹೇಳಿದೆ.ಶಾಂಘೈಯಲ್ಲಿ ಜಾರಿಯಲ್ಲಿದ್ದ ಕಠಿಣ ಕೋವಿಡ್ ನಿಯಂತ್ರಣ ಕ್ರಮಗಳನ್ನು ಬುಧವಾರ ಸಡಿಲಿಸಲಾಗಿದೆ.