ಇಸ್ರೇಲ್ ಪಡೆಯ ಗುಂಡೇಟಿನಿಂದ ಪೆಲೆಸ್ತೀನ್ ನಾಗರಿಕ ಮೃತ್ಯು
ಜೆರುಸಲೇಂ, ಜೂ.2: ಗುರುವಾರ ಪಶ್ಚಿಮ ದಂಡೆಯಲ್ಲಿ ನಡೆದ ಘರ್ಷಣೆಯಲ್ಲಿ ಇಸ್ರೇಲ್ ಪಡೆ ಓರ್ವ ಪೆಲೆಸ್ತೀನ್ ಪ್ರಜೆಯನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದು, 24 ಗಂಟೆಯ ಅವಧಿಯಲ್ಲಿ ಆಕ್ರಮಿತ ಪ್ರದೇಶದಲ್ಲಿ ಮೂರನೇ ಪೆಲೆಸ್ತೀನ್ ಪ್ರಜೆ ಇಸ್ರೇಲ್ ಯೋಧರಿಂದ ಹತರಾಗಿದ್ದಾರೆ ಎಂದು ಪೆಲೆಸ್ತೀನ್ನ ಆರೋಗ್ಯ ಸಚಿವಾಲಯ ಹೇಳಿದೆ.
ಬೆಥ್ಲಹೇಮ್ ಬಳಿಯ ನಿರಾಶ್ರಿತರ ಶಿಬಿರದಲ್ಲಿ ಹಿಂಸಾಚಾರ ಭುಗಿಲೆದ್ದಿದ್ದು ಇಸ್ರೇಲ್ ಪಡೆಯ ಗುಂಡಿನ ದಾಳಿಯಿಂದ 29 ವರ್ಷದ ಅಯ್ಮನ್ ಮುಹಾಸಿನ್ ಎಂಬ ಯುವಕ ಗಂಭೀರ ಗಾಯಗೊಂಡಿದ್ದ. ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ. ಗುಂಡಿನ ದಾಳಿಯಲ್ಲಿ 6 ಮಂದಿ ಗಾಯಗೊಂಡಿದ್ದಾರೆ ಎಂದು ಪೆಲೆಸ್ತೀನ್ ಸುದ್ಧಿಸಂಸ್ಥೆ ವಫಾ ವರದಿ ಮಾಡಿದೆ. ಬುಧವಾರ ಪಶ್ಚಿಮ ದಂಡೆಯಲ್ಲಿ ಇಸ್ರೇಲ್ ಪಡೆಯ ಗುಂಡೇಟಿನಿಂದ ಓರ್ವ ಪೆಲೆಸ್ತೀನ್ ಮಹಿಳೆ ಹಾಗೂ ವ್ಯಕ್ತಿ ಮೃತಪಟ್ಟಿದ್ದರು ಎಂದು ಸಚಿವಾಲಯದ ಹೇಳಿಕೆ ತಿಳಿಸಿದೆ.
ಶಂಕಿತ ಭಯೋತ್ಪಾದಕ ಚಟುವಟಿಕೆಯಲ್ಲಿ ಶಾಮೀಲಾಗಿರುವ ಪೆಲೆಸ್ತೀನ್ ವ್ಯಕ್ತಿಯನ್ನು ಬಂಧಿಸಲು ಇಸ್ರೇಲ್ ಭದ್ರತಾ ಪಡೆ ನಿರಾಶ್ರಿತರ ಶಿಬಿರ ಪ್ರವೇಶಿಸಿದಾಗ ಅಲ್ಲಿದ್ದವರು ಯೋಧರತ್ತ ಪೆಟ್ರೋಲ್ ಬಾಂಬ್ ಮತ್ತು ಸಿಮೆಂಟ್ ಬ್ಲಾಕ್ಗಳನ್ನು ತೂರಿದರು. ಆಗ ಆತ್ಮರಕ್ಷಣೆಗಾಗಿ ಯೋಧರು ಗುಂಡಿನ ದಾಳಿ ನಡೆಸಬೇಕಾಯಿತು. ಕಾರ್ಯಾಚರಣೆಯಲ್ಲಿ ಭಯೋತ್ಪಾದಕನ ತಂದೆಯನ್ನು ಬಂಧಿಸಲಾಗಿದೆ ಎಂದು ಇಸ್ರೇಲ್ ಸೇನೆ ಹೇಳಿದೆ. ಆಕ್ರಮಿತ ಪಶ್ಚಿಮ ದಂಡೆಯಲ್ಲಿ ಇತ್ತೀಚಿನ ದಿನಗಳಲ್ಲಿ ಇಸ್ರೇಲ್ ಭದ್ರತಾ ಪಡೆ ತನ್ನ ಕಾರ್ಯಾಚರಣೆಯನ್ನು ಹೆಚ್ಚಿಸಿದ್ದು, ಇಲ್ಲಿರುವ ನಿರಾಶ್ರಿತರ ಶಿಬಿರದ ಮೇಲೆ ದಿನಾ ದಾಳಿ ಮತ್ತು ಶೋಧ ಕಾರ್ಯಾಚರಣೆ ನಡೆಸುತ್ತಿದೆ.
ಮಾರ್ಚ್ ಬಳಿಕ ಪೆಲೆಸ್ತೀನಿಯರು ಹಾಗೂ ಇಸ್ರೇಲ್ನ ಅರಬರ ದಾಳಿಯಲ್ಲಿ 19 ಇಸ್ರೇಲಿಯನ್ನರು ಮೃತಪಟ್ಟಿದ್ದರೆ, ಪಶ್ಚಿಮ ದಂಡೆಯಲ್ಲಿ ಇಸ್ರೇಲ್ ನಡೆಸಿದ ಕಾರ್ಯಾಚರಣೆಯಲ್ಲಿ ಅಲ್ಜಝೀರಾದ ಪತ್ರಕರ್ತೆ ಶಿರೀನ್ ಸಹಿತ 38 ಪೆಲೆಸ್ತೀನೀಯರು ಹತರಾಗಿದ್ದಾರೆ ಎಂದು ವರದಿಯಾಗಿದೆ.