ಕಾಶ್ಮೀರ: ಬ್ಯಾಂಕ್ ಉದ್ಯೋಗಿ ಹತ್ಯೆಯಾದ ಕೆಲವೇ ಗಂಟೆಗಳಲ್ಲಿ ವಲಸೆ ಕಾರ್ಮಿಕನನ್ನು ಗುಂಡಿಕ್ಕಿ ಹತ್ಯೆಗೈದ ಉಗ್ರರು

ಶ್ರೀನಗರ: ಕಣಿವೆ ರಾಜ್ಯದ ಕುಲ್ಗಾಮ್‌ನಲ್ಲಿ ಬ್ಯಾಂಕ್ ಮ್ಯಾನೇಜರ್ ಹತ್ಯೆಯಾದ ಕೆಲವೇ ಗಂಟೆಗಳ ನಂತರ ಕಾಶ್ಮೀರದ ಬುದ್ಗಾಮ್‌ನಲ್ಲಿ ಭಯೋತ್ಪಾದಕರು ಇಂದು ವಲಸೆ ಕಾರ್ಮಿಕನನ್ನು ಗುಂಡಿಕ್ಕಿ ಕೊಂದಿದ್ದಾರೆ. ದಾಳಿಯಲ್ಲಿ ಮತ್ತೋರ್ವ ಕಾರ್ಮಿಕ ಗಾಯಗೊಂಡಿದ್ದು, ಆಸ್ಪತ್ರೆಗೆ ರವಾನಿಸಲಾಗಿದೆ.
ಮಧ್ಯ ಕಾಶ್ಮೀರ ಜಿಲ್ಲೆಯ ಚದೂರ ಪ್ರದೇಶದ ಮಗ್ರೆಪೋರಾದಲ್ಲಿ ಇಟ್ಟಿಗೆ ಭಟ್ಟಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ವಲಸೆ ಕಾರ್ಮಿಕರ ಮೇಲೆ ಭಯೋತ್ಪಾದಕರು ಗುಂಡು ಹಾರಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದಾಳಿಯಲ್ಲಿ ಮೃತಪಟ್ಟ ಕಾರ್ಮಿಕನನ್ನು ಬಿಹಾರ ಮೂಲದ ದಿಲ್ಕುಶ್ ಕುಮಾರ್ ಎಂದು ಗುರುತಿಸಲಾಗಿದೆ. ರಾತ್ರಿ 9.10ಕ್ಕೆ ಘಟನೆ ನಡೆದಿದ್ದು, ದಾಳಿ ಮಾಡಿದ ಭಯೋತ್ಪಾದಕರಿಗಾಗಿ ಪೊಲೀಸರು ಆ ಪ್ರದೇಶವನ್ನು ಸುತ್ತುವರಿದಿದ್ದಾರೆ.
ಜಮ್ಮು ಕಾಶ್ಮೀರವು ಇತ್ತೀಚಿನ ತಿಂಗಳುಗಳಲ್ಲಿ ಹತ್ಯೆಗಳ ಸರಣಿಯಿಂದ ಜರ್ಜರಿತವಾಗಿದೆ. ಗುರುವಾರ ಕುಲ್ಗಾಮ್ ಜಿಲ್ಲೆಯಲ್ಲಿ ಇಲಕ್ವೈ ದೇಹತಿ ಬ್ಯಾಂಕ್‌ನ ವ್ಯವಸ್ಥಾಪಕ, ರಾಜಸ್ಥಾನ ಮೂಲದ ವಿಜಯ್ ಕುಮಾರ್ ಅವರನ್ನು ಗುಂಡಿಕ್ಕಿ ಕೊಲ್ಲಲಾಗಿತ್ತು.