ಅಲ್ಪಸಂಖ್ಯಾತರ ಮೇಲೆ ಭಾರತದಲ್ಲಿ ವರ್ಷವಿಡೀ ದಾಳಿ: ಅಮೆರಿಕ ರಕ್ಷಣಾ ಇಲಾಖೆ ವರದಿ
ಹೊಸದಿಲ್ಲಿ,ಜೂ.3: ಹಿಂದುಯೇತರರನ್ನು ಗುರಿಯಾಗಿಸಿಕೊಂಡು ಹತ್ಯೆಗಳು,ಹಲ್ಲೆಗಳು,ಬೆದರಿಕೆ ಮತ್ತು ಗೋರಕ್ಷಣೆಯ ಹೆಸರಿನಲ್ಲಿ ಅಹಿತಕರ ಘಟನೆಗಳು ಸೇರಿದಂತೆ ದಾಳಿಗಳು ಭಾರತದಲ್ಲಿ 2021ನೇ ಸಾಲಿನುದ್ದಕ್ಕೂ ನಡೆದಿದ್ದವು ಎಂದು ಗುರುವಾರ ಬಿಡುಗಡೆಗೊಂಡ ಅಮೆರಿಕ ವಿದೇಶಾಂಗ ಇಲಾಖೆಯ ವರದಿಯು ಬೆಟ್ಟು ಮಾಡಿದೆ.
ಅಂತರರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ ಕುರಿತು 2021ನೇ ಸಾಲಿನ ವರದಿಯು ಧಾರ್ಮಿಕ ಅಲ್ಪಸಂಖ್ಯಾತರ ವಿರುದ್ಧದ ದಾಳಿಗಳನ್ನು ದಾಖಲಿಸಲು ಮಾಧ್ಯಮಗಳು ಮತ್ತು ಸರಕಾರಿ ಮೂಲಗಳಿಂದ ಮಾಹಿತಿಗಳನ್ನು ಕಲೆ ಹಾಕಿತ್ತು,ಆದರೆ ಈ ಬಗ್ಗೆ ಅದು ಯಾವುದೇ ಅಭಿಪ್ರಾಯವನ್ನು ವ್ಯಕ್ತಪಡಿಸಿಲ್ಲ.
ಸುದ್ದಿಗೋಷ್ಠಿಯಲ್ಲಿ ವರದಿಯನ್ನು ಬಿಡುಗಡೆ ಮಾಡಿ ಮಾತನಾಡಿದ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆ್ಯಂಟನಿ ಬ್ಲಿಂಕೆನ್ ಅವರು, ‘ವಿಶ್ವದ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ಮತ್ತು ವೈವಿಧ್ಯಮಯ ನಂಬಿಕೆಗಳ ದೇಶವಾಗಿರುವ ಭಾರತದಲ್ಲಿ ಜನರು ಮತ್ತು ಪೂಜಾಸ್ಥಳಗಳ ಮೇಲೆ ದಾಳಿಗಳನ್ನು ಹೆಚ್ಚುತ್ತಿರುವುದನ್ನು ನಾವು ನೋಡುತ್ತಿದ್ದೇವೆ’ ಎಂದು ಹೇಳಿದರು.
ಅಂತರರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರಕ್ಕಾಗಿ ಅಮೆರಿಕ ರಾಯಭಾರಿ ರಾಶದ್ ಹುಸೇನ್ ಅವರೂ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಭಾರತದಲ್ಲಿ ಕೆಲವು ಅಧಿಕಾರಿಗಳು ಜನರು ಮತ್ತು ಪೂಜಾಸ್ಥಳಗಳ ಮೇಲಿನ ಹೆಚ್ಚುತ್ತಿರುವ ದಾಳಿಗಳನ್ನು ಕಡೆಗಣಿಸುತ್ತಿದ್ದಾರೆ ಅಥವಾ ಅವುಗಳನ್ನು ಬೆಂಬಲಿಸುತ್ತಿದ್ದಾರೆ ಎಂದು ಹೇಳಿದರು.ಕಳೆದ ವರ್ಷ ಜಮ್ಮು-ಕಾಶ್ಮೀರದಲ್ಲಿ ಭಯೋತ್ಪಾದಕರು ಹಿಂದುಗಳು ಮತ್ತು ಸಿಕ್ಖರನ್ನು ಗುರಿಯಾಗಿಸಿಕೊಂಡು ದಾಳಿಗಳನ್ನು ನಡೆಸಿದ್ದನ್ನೂ ಪ್ರಸ್ತಾಪಿಸಿರುವ ವರದಿಯು,ಶಂಕಿತ ಭಯೋತ್ಪಾದಕರು ಹಿಂದು ಮತ್ತು ಸಿಖ್ ಅಲ್ಪಸಂಖ್ಯಾತ ಸಮುದಾಯಗಳಿಗೆ ಸೇರಿದ ನಾಗರಿಕರು ಮತ್ತು ವಲಸಿಗರನ್ನು ಕೊಂದಿದ್ದಾರೆ. ಡಿಸೆಂಬರ್ 2021ಕ್ಕೆ ಇದ್ದಂತೆ ಭಯೋತ್ಪಾದಕರು ಹಿಂದು ಮತ್ತು ಸಿಖ್ ಸಮುದಾಯಗಳ ಇಬ್ಬರು ಶಾಲಾ ಶಿಕ್ಷಕರು ಸೇರಿದಂತೆ 39 ನಾಗರಿಕರ ಹತ್ಯೆಗಳನ್ನು ನಡೆಸಿದ್ದಾರೆ ಎಂದು ತಿಳಿಸಿದೆ.
2021ನೇ ಸಾಲಿಗೆ ಕೋಮು ಹಿಂಸಾಚಾರದ ದತ್ತಾಂಶಗಳನ್ನು ಬಿಡುಗಡೆ ಮಾಡುವಲ್ಲಿ ಮೋದಿ ಸರಕಾರವು ವಿಫಲಗೊಂಡಿದೆ ಎಂದು ಹೇಳಿರುವ ವರದಿಯು,2020ನೇ ಸಾಲಿಗಾಗಿ ಬಿಡುಗಡೆಗೊಳಿಸಿದ್ದ ದತ್ತಾಂಶಗಳು 2019ನೇ ಸಾಲಿಗೆ ಹೋಲಿಸಿದರೆ ಕೋಮು ಹಿಂಸಾಚಾರದಲ್ಲಿ ತೀವ್ರ ಹೆಚ್ಚಳವನ್ನು ತೋರಿಸಿದ್ದವು ಎಂದಿದೆ.
ಚಾರ್ಜಸ್ ಡಿ ಅಫೇರ್ಸ್ ಸೇರಿದಂತೆ ಅಮೆರಿಕ ರಾಯಭಾರ ಕಚೇರಿಯ ಅಧಿಕಾರಿಗಳು ಧಾರ್ಮಿಕ ಅಲ್ಪಸಂಖ್ಯಾತರ ಹಕ್ಕುಗಳನ್ನು ಖಚಿತಪಡಿಸಿಕೊಳ್ಳಲು ಧಾರ್ಮಿಕ ಸ್ವಾತಂತ್ರದ ಮಹತ್ವ ಮತ್ತು ಪ್ರಜಾಪ್ರಭುತ್ವ ದೇಶಗಳ ಹೊಣೆಗಾರಿಕೆ ಕುರಿತಂತೆ ಭಾರತದ ಸಂಸತ್ ಸದಸ್ಯರು ಹಾಗೂ ವಿವಿಧ ರಾಜಕೀಯ ಸಿದ್ಧಾಂತಗಳ ರಾಜಕಾರಣಿಗಳೊಂದಿಗೆ ಮಾತುಕತೆಗಳಲ್ಲಿ ತೊಡಗಿಕೊಂಡಿದ್ದಾರೆ ಎಂದು ವರದಿಯು ತಿಳಿಸಿದೆ.
ವಿದೇಶಿ ದೇಣಿಗೆಗಳ ಕಾಯ್ದೆಗೆ ತಂದಿರುವ ತಿದ್ದುಪಡಿಗಳ ವಿರುದ್ಧ ಭಾರತದಲ್ಲಿ ಕಾರ್ಯಾಚರಿಸುತ್ತಿರುವ ಎನ್ಜಿಒಗಳ ಟೀಕೆಗಳನ್ನೂ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಭಾರತದ 28 ರಾಜ್ಯಗಳ ಪೈಕಿ ಗುಜರಾತ,ರಾಜಸ್ಥಾನ,ಉತ್ತರ ಪ್ರದೇಶ ಸೇರಿದಂತೆ 10 ರಾಜ್ಯಗಳು ಮತಾಂತರ ನಿಷೇಧ ಕಾನೂನುಗಳನ್ನು ಹೊಂದಿವೆ ಎಂದು ತಿಳಿಸಿರುವ ವರದಿಯು,ಧಾರ್ಮಿಕ ಮತಾಂತರ ಕೃತ್ಯಗಳ ಆಧಾರದಲ್ಲಿ ಕ್ರೈಸ್ತರು ಮತ್ತು ಮುಸ್ಲಿಮ್ರಂತಹ ಧಾರ್ಮಿಕ ಅಲ್ಪಸಂಖ್ಯಾತರ ವಿರುದ್ಧ ದಾಖಲಾಗಿರುವ ದೂರುಗಳ ಬಗ್ಗೆಯೂ ಮಾತನಾಡಿದೆ. ಧಾರ್ಮಿಕ ಅಲ್ಪಸಂಖ್ಯಾತರ ಮೇಲಿನ ದಾಳಿಗಳನ್ನು ತಡೆಯುವಲ್ಲಿ ಸರಕಾರವು ವಿಫಲಗೊಂಡಿದೆ ಎಂದು ಕೆಲವು ಎನ್ಜಿಒಗಳು ವರದಿ ಮಾಡಿರುವುದನ್ನು ಅದು ಉಲ್ಲೇಖಿಸಿದೆ.
25 ರಾಜ್ಯಗಳು ಗೋಹತ್ಯೆಯನ್ನು ಭಾಗಶಃ ಅಥವಾ ಸಂಪೂರ್ಣವಾಗಿ ನಿಷೇಧಿಸಿವೆ ಎಂದಿರುವ ವರದಿಯು,ಗೋರಕ್ಷಣೆ ಕುರಿತು ಮಧ್ಯಪ್ರದೇಶದಲ್ಲಿಯ ಕಾನೂನುಗಳನ್ನು ವಿಶೇಷವಾಗಿ ಬೆಟ್ಟು ಮಾಡಿದೆ.ಮಧ್ಯಪ್ರದೇಶದಲ್ಲಿ ಗೋರಕ್ಷಣೆಯ ಹೆಸರಿನಲ್ಲಿ ಹಿಂಸಾಚಾರಕ್ಕಾಗಿ 25,000ರೂ.ಗಳಿಂದ 50,000 ರೂ.ವರೆಗೆ ದಂಡ ಮತ್ತು ಆರು ತಿಂಗಳುಗಳಿಂದ ಮೂರು ವರ್ಷಗಳವರೆಗೆ ಜೈಲು ಶಿಕ್ಷೆಯನ್ನು ವಿಧಿಸಲಾಗುತ್ತಿದೆ. ಇದು ದೇಶದಲ್ಲಿ ಅಸ್ತಿತ್ವದಲ್ಲಿರುವ ಇಂತಹ ಏಕೈಕ ಕಾನೂನಾಗಿದೆ ಎಂದು ವರದಿಯು ತಿಳಿಸಿದೆ.
ಅಂತರರಾಷ್ಟ್ರೀಯ ಸಂಬಂಧಗಳಲ್ಲಿ ವೋಟ್ಬ್ಯಾಂಕ್ ರಾಜಕೀಯ: ಅಮೆರಿಕ ವರದಿಗೆ ಭಾರತದ ಖಂಡನೆ
ಅಲ್ಪಸಂಖ್ಯಾತರ ಮೇಲೆ ದಾಳಿಗಳ ಕುರಿತು ಅಮೆರಿಕ ವಿದೇಶಾಂಗ ಇಲಾಖೆಯ ವರದಿಯನ್ನು ಖಂಡಿಸಿರುವ ಭಾರತವು,ಅಂತರರಾಷ್ಟ್ರೀಯ ಸಂಬಂಧಗಳಲ್ಲಿ ವೋಟ್ ಬ್ಯಾಂಕ್ ರಾಜಕೀಯವನ್ನು ನಡೆಸುತ್ತಿರುವುದು ದುರದೃಷ್ಟಕರವಾಗಿದೆ ಎಂದು ಬಣ್ಣಿಸಿದೆ.
‘ಅಂತರರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ ಕುರಿತು ಅಮೆರಿಕ ವಿದೇಶಾಂಗ ಇಲಾಖೆಯ ವರದಿಯನ್ನು ಮತ್ತು ತಪ್ಪು ಮಾಹಿತಿಗಳಿಂದ ಕೂಡಿದ ಹಿರಿಯ ಅಧಿಕಾರಿಗಳ ಹೇಳಿಕೆಗಳನ್ನು ನಾವು ಗಮನಿಸಿದ್ದೇವೆ. ಅಂತರರಾಷ್ಟ್ರೀಯ ಸಂಬಂಧಗಳಲ್ಲಿ ವೋಟ್ ಬ್ಯಾಂಕ್ ರಾಜಕೀಯವನ್ನು ನಡೆಸುತ್ತಿರುವುದು ದುರದೃಷ್ಟಕರವಾಗಿದೆ. ಪ್ರೇರಿತ ಮಾಹಿತಿಗಳು ಮತ್ತು ಪಕ್ಷಪಾತದ ದೃಷ್ಟಿಕೋನಗಳ ಆಧಾರದಲ್ಲಿ ವೌಲ್ಯಮಾಪನವನ್ನು ನಡೆಸುವುದನ್ನು ಕೈಬಿಡುವಂತೆ ನಾವು ಆಗ್ರಹಿಸುತ್ತೇವೆ ’ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಹೇಳಿದೆ.