ಪಠ್ಯದಲ್ಲಿ ‘ಡಾ. ರಾಜ್’ ಕುರಿತ ಬರಹವನ್ನು ಪ್ರಕಟಿಸುವ ಅನುಮತಿ ವಾಪಸ್ ಪಡೆದ ಲೇಖಕ ದೊಡ್ಡ ಹುಲ್ಲೂರು ರುಕ್ಕೋಜಿರಾವ್

ಲೇಖಕ ದೊಡ್ಡ ಹುಲ್ಲೂರು ರುಕ್ಕೋಜಿರಾವ್ | ನಟ ಡಾ. ರಾಜ ಕುಮಾರ್
ಬೆಂಗಳೂರು: ರೋಹಿತ್ ಚಕ್ರತೀರ್ಥ ನೇತೃತ್ವದ ಪಠ್ಯ ಪುಸ್ತಕ ಮರು ಪರಿಷ್ಕರಣೆಯ ವಿರುದ್ಧ ಸಾಹಿತಿಗಳು ಆಕ್ರೋಶ ಮುಂದುವರಿಸಿದ್ದಾರೆ.
ಇದೀಗ ಕನ್ನಡ ನಟ ಡಾ. ರಾಜ ಕುಮಾರ್ ಬಗ್ಗೆ ಬರೆದಿದ್ದ ಬರಹವನ್ನು ಲೇಖಕ ದೊಡ್ಡ ಹುಲ್ಲೂರು ರುಕ್ಕೋಜಿರಾವ್ ಪಠ್ಯದಿಂದ ವಾಪಸ್ ಪಡೆದಿದ್ದಾರೆ.
ಈ ಸಂಬಂಧ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಗೆ ಪತ್ರ ಬರೆದಿರುವ ಅವರು, ‘ವರನಟ ಡಾ.ರಾಜಕುಮಾರ್ ಬಗೆಗಿನ ಲೇಖನವನ್ನು ಆರನೇ ತರಗತಿಯ ಪಠ್ಯದಲ್ಲಿ ಸೇರಿಸಲು ನೀಡಿದ್ದ ಒಪ್ಪಿಗೆಯನ್ನು ಹಿಂಪಡೆದಿದ್ದೇನೆ. ಕನ್ನಡ ದ್ರೋಹದ ಮಾತನಾಡಿರುವ ವ್ಯಕ್ತಿಯ ಮರು ಪರಿಷ್ಕರಣೆ ಪಠ್ಯದಲ್ಲಿ ಬಳಸಲು ನಾನು ಒಪ್ಪುವುದಿಲ್ಲ’ ಎಂದು ತಿಳಿಸಿದ್ದಾರೆ.
ದೊಡ್ಡ ಹುಲ್ಲೂರು ರುಕ್ಕೋಜಿರಾವ್ ಅವರ ಪತ್ರದ ಸಾರಾಂಶ
''ನಾನು ಡಾ. ರಾಜಕುಮಾರ್ ಅವರ ಬಗ್ಗೆ ಬರೆದ ಲೇಖನವನ್ನು ಪ್ರೋ. ಬರಗೂರು ರಾಮಚಂದ್ರಪ್ಪನವರ ನೇತೃತ್ವದ ಪಠ್ಯ ಪರಿಷ್ಕರಣೆ ಸಂದರ್ಭದಲ್ಲಿ 6 ನೇ ತರಗತಿಯ ಪ್ರಥಮ ಭಾಷೆ ಕನ್ನಡ ಪುಸ್ತಕಕ್ಕೆ ಸೇರಿಸಲು ಒಪ್ಪಿಗೆ ನೀಡಿದ್ದೆ. ಈಗ ರೋಹಿತ್ ಚಕ್ರತೀರ್ಥ ಎಂಬುವವರ ಅಧ್ಯಕ್ಷತೆಯಲ್ಲಿ ನಡೆದ ಮರುಪರಿಷ್ಕರಣೆ ಬಗ್ಗೆ ದೊಡ್ಡ ವಿವಾದ ಎದ್ದಿದೆ.'' ಎಂದು ಹೇಳಿದ್ದಾರೆ.
''ರೋಹಿತ್ ಚಕ್ರತೀರ್ಥರು ನಾಡಧ್ವಜವನ್ನು ಒಳ ಉಡುಪಿಗೆ ಹೋಲಿಸಿದ್ದಾರೆ. ಕುವೆಂಪು ಅವರನ್ನು ಕೀಳಾಗಿ ಕಂಡಿದ್ದಾರೆ. ಕನ್ನಡ ಭಾಷೆಯನ್ನು ತನ್ನ ಮೇಲೆ ಹೇರಲಾಗಿದೆ ಎಂದು ಕನ್ನಡ ವಿರೋಧಿ ಮಾತನಾಡಿದ್ದಾರೆ. ಅಪೂರ್ವ ಕನ್ನಡ ಪ್ರೇಮಿಯಾದ, ನಾಡು ನುಡಿಗಾಗಿ ಹೋರಾಡಿದ ಡಾ. ರಾಜಕುಮಾರ್ ಅವರ ಬಗ್ಗೆ ಬರೆದ ತನ್ನ ಲೇಖನವನ್ನು, ಕನ್ನಡ ದ್ರೋಹದ ಮಾತನಾಡಿರುವ ವ್ಯಕ್ತಿಯ ಮರು ಪರಿಷ್ಕರಣೆ ಪಠ್ಯದಲ್ಲಿ ಬಳಸಲು ನಾನು ಒಪ್ಪುವುದಿಲ್ಲ. ಇಂಥವರ ನೇತೃತ್ವದ ಮರು ಪರಿಷ್ಕರಣೆ ಪಠ್ಯದಲ್ಲಿ ಡಾ. ರಾಜಕುಮಾರ್ ಸೇರಿಸಲು ಒಪ್ಪುವುದು ಡಾ. ರಾಜಕುಮಾರ್ ಅವರಿಗೆ ಅವಮಾನ ಮಾಡಿದಂತೆ ಎಂಬ ಕಾರಣವನ್ನು ತಿಳಿಸುತ್ತಾ ನನ್ನ ಲೇಖನವನ್ನು ಬಳಸಬಾರದು ಎಂದು ವಿನಂತಿಸುತ್ತೇನೆ'' ಎಂದು ರುಕ್ಕೋಜಿರಾವ್ ಪತ್ರದಲ್ಲಿ ತಿಳಿಸಿದ್ದಾರೆ.







