ನಗರಸಭೆ ಸದಸ್ಯ ಪ್ರಶಾಂತ್ ಕೊಲೆ ಆರೋಪಿಗಳ ಬಂಧನಕ್ಕೆ ಮೂರು ತಂಡ ರಚನೆ; ಐಜಿಪಿ ಪ್ರವೀಣ್ ಮಧುಕರ್ ಪವಾರ್

ಹಾಸನ: ಜೂ,3: ನಗರಸಭೆ ಸದಸ್ಯ ಪ್ರಶಾಂತ್ ನಾಗರಾಜು ಹತ್ಯೆಗೆ ಕಾರಣರಾದವರ ಶೀಘ್ರ ಪತ್ತೆ ಮಾಡಲು ಪೊಲೀಸ್ ಇಲಾಖೆಯ ಮೂರು ತಂಡಗಳು ಸಜ್ಜಾಗಿ ತನಿಖೆಯಲ್ಲಿದ್ದು, ಸಾಕ್ಷಿ ಸಂಗ್ರಹ ಮಾಡಿದ ನಂತರ ಆರೋಪಿಗಳನ್ನು ಬಂಧಿಸುವುದಾಗಿ ದಕ್ಷಿಣ ವಲಯ ಐಜಿಪಿ ಪ್ರವೀಣ್ ಮಧುಕರ್ ಪವಾರ್ ವಿಶ್ವಾಸವ್ಯಕ್ತಪಡಿಸಿದರು.
ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಛೇರಿಯಲ್ಲಿ ಸಭೆ ನಡೆಸಿದ ನಂತರ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಜೆಡಿಎಸ್ ಮುಖಂಡ ಹಾಗೂ ನಗರಸಭೆ ಸದಸ್ಯರಾಗಿದ್ದ ಪ್ರಶಾಂತ್ ಕೊಲೆ ವಿಚಾರವಾಗಿ ಎಸ್ಪಿ ಶ್ರೀನಿವಾಸ್ ಗೌಡ ಮತ್ತು ಪೊಲೀಸ್ ಅಧಿಕಾರಿಗಳೊಂದಿಗೆ ಸಮಗ್ರವಾಗಿ ಚರ್ಚಿಸಲಾಗಿದ್ದು, ಈ ಪ್ರಕರಣದಲ್ಲಿ ನಿಷ್ಪಕ್ಷಪಾತವಾಗಿ ತನಿಖೆ ಮಾಡಿ ಸೈಂಟಿಫಿಕ್ ಹಾಗೂ ಟೆಕ್ನಿಕಲ್ ಸಾಕ್ಷಿ ಸಂಗ್ರಹಿಸಿ ವರದಿ ನೀಡುವಂತೆ ಸೂಚನೆ ಕೊಡಲಾಗಿದೆ. ಆರೋಪಿಯ ಬಗ್ಗೆ ಮಾಹಿತಿ ಸಂಗ್ರಹಿಸಲು ನಮ್ಮ ಮೂರು ತಂಡ ಸಜ್ಜಾಗಿದೆ. ಈ ವಿಚಾರವಾಗಿ ಕಟ್ಟುನಿಟ್ಟಿನ ತನಿಖೆ ಮಾಡಲಾಗುವುದು. ನನಗೆ ವಿಶ್ವಾಸವಿದ್ದು, ಆದಷ್ಟು ಶೀಘ್ರದಲ್ಲಿ ಆರೋಪಿಗಳನ್ನು ದಸ್ತಗಿರಿ ಮಾಡಲಾಗುವುದು.ಸಮಗ್ರವಾಗಿ ತನಿಖೆ ನಡೆಸಿದ ನಂತರದಲ್ಲಿ ಚಾಜ್ ಶೀಟ್ ಮಾಡಲಾಗುವುದು ಎಂದರು.
ಯಾರನ್ನು ಬಂದಿಸಿಲ್ಲ
ಜಿಲ್ಲಾ ಉಸ್ತುವಾರಿ ಸಚಿವ .ಗೋಪಾಲಯ್ಯ ಅವರು, ಪ್ರಶಾಂತ್ ಕೊಲೆಗೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಲಾಗಿದೆ ಎಂಬ ಹೇಳಿಕೆ ವಿಚಾರವಾಗಿ ಪ್ರಶ್ನೆಗೆ ಉತ್ತರಿಸಿದ ಐಜಿಪಿ ಅವರು ನಾವು ಯಾರನ್ನೂ ಇದುವರೆಗೂ ಬಂಧನ ಮಾಡಿರುವುದಿಲ್ಲ. ಪೊಲೀಸರು ಮೂರು ತಂಡ ಮಾಡಿಕೊಂಡು ಆರೋಪಿಯನ್ನು ಬಂಧಿಸಲು ಈಗಾಗಲೇ ತೆರಳಿದ್ದಾರೆ. ಉಸ್ತುವಾರಿ ಸಚಿವರು ನೀಡಿರುವ ಹೇಳಿಕೆ ಬಗ್ಗೆ ನನಗೆ ತಿಳಿದಿರುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ನಿಷ್ಪಕ್ಷಪಾತವಾದ ತನಿಖೆ ಆಗಬೇಕು ಎಂಬ ಉದ್ದೇಶದಿಂದ ಎಸ್ಪಿ ಅವರು ಸಿಪಿಐ ರೇಣುಕಾಪ್ರಸಾದ್ ಅವರನ್ನು ರಜೆ ಮೇಲೆ ಕಳುಹಿಸಿದ್ದಾರೆ. ಜಿಲ್ಲಾ ಪೊಲೀಸರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಪ್ರಶಾಂತ್ ಹತ್ಯೆ ವಿಚಾರವಾಗಿ ಭಾಗಿಯಾಗಿರುವ ಎಲ್ಲಾ ಆರೋಪಿಗಳನ್ನು ಶೀಘ್ರವೇ ಬಂಧಿಸಲಾಗುವುದು ಎಂದು ಹೇಳಿದರು.







