ಪಠ್ಯ ಪರಿಕ್ಷರಣಾ ಸಮಿತಿಯ ಮತ್ತೊಂದು ಎಡವಟ್ಟು: 3 ಮತ್ತು 4ನೇ ತರಗತಿ ಪುಸ್ತಕಗಳಲ್ಲಿದೆ ಒಂದೇ ಪದ್ಯ!

ಬೆಂಗಳೂರು, ಜೂ.3: ತರಾತುರಿಯಲ್ಲಿ ನೂತನ ಪಠ್ಯ ಪರಿಷ್ಕರಣೆ ಮಾಡಲಾಗಿದ್ದು, ಪ್ರತಿದಿನ ಒಂದಿಲ್ಲೊಂದು ತಪ್ಪುಗಳು ಬಹಿರಂಗಗೊಳ್ಳುತ್ತಿವೆ. ಇದೀಗ ರೋಹಿತ್ ಚಕ್ರತೀರ್ಥ ಸಮಿತಿಯು ‘ಬಾವಿಯಲ್ಲಿ ಚಂದ್ರ’ ಎಂಬ ಪದ್ಯವನ್ನು 3 ಮತ್ತು 4ನೇ ತರಗತಿಗಳೆರಡಲ್ಲಿಯೂ ಸೇರಿಸಿ ಎಡವಟ್ಟು ಮಾಡಿಕೊಂಡಿರುವುದು ಕಂಡುಬಂದಿದೆ.
ಬಿ.ಎಂ ಶರ್ಮಾರವರು ಬರೆದ ‘ಬಾವಿಯಲ್ಲಿ ಚಂದ್ರ’ ಮಕ್ಕಳ ಪದ್ಯವನ್ನು ಹಿಂದಿನ ಬರಗೂರು ರಾಮಚಂದ್ರಪ್ಪನವರ ಸಮಿತಿಯು 3 ನೇ ತರಗತಿ ನಲಿಕಲಿ ಕನ್ನಡ ಪಠ್ಯದಲ್ಲಿ ಸೇರಿಸಿತ್ತು. ನೂತನ ರೋಹಿತ್ ಚಕ್ರತೀರ್ಥ ಸಮಿತಿಯು 3ನೇ ತರಗತಿಯ ನಲಿಕಲಿ ಕನ್ನಡ ಪಠ್ಯದಲ್ಲಿ ಅದನ್ನು ಹಾಗೆ ಉಳಿಸಿಕೊಂಡಿದ್ದಲ್ಲದೆ, 4ನೇ ತರಗತಿಯ ಸವಿಕನ್ನಡ ಪುಸ್ತಕದಲ್ಲಿಯೂ ಅದೇ ಪದ್ಯವನ್ನು ಸೇರಿಸಿದೆ. ಆ ಮೂಲಕ ಮಕ್ಕಳು 3 ಮತ್ತು 4 ನೇ ಎರಡೂ ತರಗತಿಗಳಲ್ಲಿಯೂ ಒಂದೇ ಪದ್ಯ ಕಲಿಯಬೇಕಾದ ದುಸ್ಥಿತಿ ಎದುರಾಗಿದೆ ಎಂದು ಶಿಕ್ಷಕರೊಬ್ಬರು ದೂರಿದ್ದಾರೆ.
ಪಠ್ಯ ಪರಿಷ್ಕರಣೆ ಎಂಬುದು ಮಹತ್ವದ ಕೆಲಸ. ಒಂದೀಡಿ ಪೀಳಿಕೆಯನ್ನು ತಯಾರಿಸುವ ಕೆಲಸ. ಅದನ್ನು ತಜ್ಞರು, ಅನುಭವಿಗಳು ನಿರ್ವಹಿಸಬೇಕು. ಆದರೆ ಯಾವುದೇ ಶೈಕ್ಷಣಿಕ ಅರ್ಹತೆ ಇಲ್ಲದ ರೋಹಿತ್ ಚಕ್ರತೀರ್ಥನಂತವರು ಅದನ್ನು ನಿಭಾಯಿಸಲು ಹೋಗಿ ಭಾರೀ ಅನಾಹುತ ಸೃಷ್ಟಿಸಿದ್ದಾರೆ ಎಂಬ ಆರೋಪಗಳು ಕೇಳಿಬರುತ್ತಿವೆ. ಅದಕ್ಕೆ ಇಂಬುಕೊಡುವಂತೆ ಇಂತಹ ಎಡವಟ್ಟುಗಳು ಪ್ರತಿದಿನ ಹೊರಬರುತ್ತಿವೆ.





