ಶಿಕ್ಷೆ ಹೆಚ್ಚಳಕ್ಕೆ ಮನವಿ ಸಲ್ಲಿಸಲು ಸಂತ್ರಸ್ತರಿಗೂ ಅವಕಾಶ: ಕೇಂದ್ರಕ್ಕೆ ಹೈಕೋರ್ಟ್ ಸಲಹೆ

ಬೆಂಗಳೂರು, ಜೂ.3: ಅಪರಾಧಿಗೆ ವಿಧಿಸಲಾಗುವ ಶಿಕ್ಷೆಯ ಪ್ರಮಾಣ ಹೆಚ್ಚಿಸುವಂತೆ ಕೋರಿ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಲು ಪ್ರಕರಣದ ಸಂತ್ರಸ್ತರಿಗೂ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಸಿಆರ್‍ಪಿಸಿ ಸೆಕ್ಷನ್ 372ಕ್ಕೆ ಅಗತ್ಯ ತಿದ್ದುಪಡಿ ತರುವಂತೆ ಕೇಂದ್ರ ಸರಕಾರಕ್ಕೆ ಹೈಕೋರ್ಟ್ ಸಲಹೆ ನೀಡಿದೆ.
ಮಾನನಷ್ಟ ಮೊಕದ್ದಮೆಯೊಂದರಲ್ಲಿ ಪತ್ರಕರ್ತ ಆರ್.ಕೆ.ರವಿಕುಮಾರ್ ಎಂಬುವವರಿಗೆ ವಿಧಿಸಿದ್ದ 9 ತಿಂಗಳ ಜೈಲುಶಿಕ್ಷೆಯನ್ನು ಹೆಚ್ಚಿಸುವಂತೆ ಕೋರಿ ಮೂಲದೂರುದಾರರೂ ಆಗಿರುವ ನಿವೃತ್ತ ಐಎಎಸ್ ಅಧಿಕಾರಿ ಬಿ.ಎ.ಹರೀಶ್‍ಗೌಡ ಹೈಕೋರ್ಟ್‍ಗೆ ಕ್ರಿಮಿನಲ್ ಮರುಪರಿಶೀಲನಾ ಅರ್ಜಿ ಸಲ್ಲಿಸಿದ್ದರು. ಮತ್ತೊಂದೆಗೆ ಶಿಕ್ಷೆ ರದ್ದುಪಡಿಸುವಂತೆ ಕೋರಿ ರವಿಕುಮಾರ್ ಸಹ ಹೈಕೋರ್ಟ್ ಮೆಟ್ಟಿಲೇರಿದ್ದರು.
ಈ ಅರ್ಜಿಗಳನ್ನು ವಿಚಾರಣೆ ನಡೆಸಿದ ಹೈಕೋರ್ಟ್ ಏಕಸದಸ್ಯ ನ್ಯಾಯಪೀಠ, ಸಿಆರ್‍ಪಿಸಿ ಸೆಕ್ಷನ್ 372ರ ಪ್ರಕಾರ, ಆರೋಪಿಗಳಿಗೆ ವಿಚಾರಣಾ ನ್ಯಾಯಾಲಯ ವಿಧಿಸಿರುವ ಶಿಕ್ಷೆಯ ಪ್ರಮಾಣ ಹೆಚ್ಚಿಸುವಂತೆ ಕೋರಿ ಮೇಲ್ಮನವಿ ಸಲ್ಲಿಸಲು ಸಂತ್ರಸ್ತರಿಗೆ ಅವಕಾಶವಿಲ್ಲ ಎಂದು ಅಭಿಪ್ರಾಯಪಟ್ಟು ಬಿ.ಎ.ಹರೀಶ್‍ಗೌಡ ಅರ್ಜಿಯನ್ನು ವಜಾಗೊಳಿಸಿತು. ಅಗತ್ಯ ತಿದ್ದುಪಡಿ ತರುವಂತೆ ಆದೇಶಿಸಿರುವ ಪ್ರತಿಯನ್ನು ಕಾನೂನು ಮತ್ತು ನ್ಯಾಯ ಸಚಿವಾಲಯಕ್ಕೆ ಕಳುಹಿಸಿಕೊಡುವಂತೆ ರಿಜಿಸ್ಟ್ರಾರ್‍ಗೆ ನಿರ್ದೇಶಿಸಿದೆ.







