ಮಂಗಳೂರು: ಪಿಎಫ್‌ಐ ಪ್ರತಿಭಟನೆ

ಮಂಗಳೂರು : ಸಂಘಟನೆಯ ಬ್ಯಾಂಕ್ ಖಾತೆಗಳನ್ನು ತಾತ್ಕಾಲಿಕವಾಗಿ ಮುಟ್ಟುಗೋಲು ಹಾಕಿರುವ ಈಡಿ ಕ್ರಮ ವನ್ನು ಖಂಡಿಸಿ ಪಿಎಫ್‌ಐ ದ.ಕ.ಜಿಲ್ಲಾ ಸಮಿತಿಯ ವತಿಯಿಂದ ಶುಕ್ರವಾರ ನಗರದ ಕ್ಲಾಕ್ ಟವರ್ ಬಳಿ ಪ್ರತಿಭಟನೆ ನಡೆಸಲಾಯಿತು.
ಪಿಎಫ್‌ಐ ಜಿಲ್ಲಾಧ್ಯಕ್ಷ ಇಜಾಝ್ ಅಹ್ಮದ್ ಮಾತನಾಡಿ ಈಡಿ ಆರೆಸ್ಸೆಸ್‌ನ ತಾಳಕ್ಕೆ ತಕ್ಕಂತೆ ಕುಣಿಯುತ್ತಿದೆ. ಆರೆಸ್ಸೆಸ್‌ನ ಸೂಚನೆಯಂತೆ ಪಿಎಫ್‌ಐ ಸಂಘಟನೆಯನ್ನು ಗುರುಪಡಿಸುತ್ತಲೇ ಇದೆ. ಕಳೆದ ಬಾರಿ ಪಿಎಫ್‌ಐಗೆ ವಿದೇಶದಿಂದ ೧೨೦ ಕೋ.ರೂ. ವರ್ಗಾವಣೆ ಆಗಿದೆ ಎಂದು ಮಾಧ್ಯಮಗಳಲ್ಲಿ ಸುದ್ದಿಯಾಗುವಂತೆ ಈಡಿ ನೋಡಿ ಕೊಂಡಿತ್ತು. ಇದೀಗ ಕಳೆದ ೧೩ ವರ್ಷದಲ್ಲಿ ಪಿಎಫ್‌ಐಗೆ ೬೦ ಕೋ.ರೂ. ಹಣ ವರ್ಗಾವಣೆಯಾಗಿದೆ ಎಂಬ ಹೇಳಿಕೆಯನ್ನು ಈಡಿ ನೀಡುತ್ತಿದೆ ಹಾಗಿದ್ದರೆ ಈ ಹಿಂದೆ ಹೊರಿಸಲಾದ ೧೨೦ ಕೋ.ರೂ. ವರ್ಗಾವಣೆಯ ಆರೋಪವು ಸುಳ್ಳೆಂದು ಈಡಿ ಒಪ್ಪಿಕೊಂಡಂತಾಗಿದೆ ಎಂದರು.
ಈಡಿ ಕ್ರಮದ ವಿರುದ್ಧ ಪಿಎಫ್‌ಐ ಕಾನೂನು ಹೋರಾಟ ಮಾಡಲಿದೆ ಎಂದ ಇಜಾಝ್ ಅಹ್ಮದ್, ಪಿಎಫ್‌ಐ ಎಂದೂ ಕೂಡ ಹಣವನ್ನು ದೇಶದ್ರೋಹದ ಚಟುವಟಿಕೆಗಳಿಗೆ ವ್ಯಯಿಸಿಲ್ಲ. ಜನಸಾಮಾನ್ಯರು ನೀಡಿದ ದೇಣಿಗೆಗಳನ್ನು ಪ್ರಾಕೃತಿಕ ವಿಕೋಪ, ಕೋವಿಡ್ ನಿರ್ವಹಣೆ, ಆರ್ಥಿಕವಾಗಿ ಹಿಂದುಳಿದ ಅರ್ಹ ವಿದ್ಯಾರ್ಥಿಗಳ ಶಿಕ್ಷಣಕ್ಕೆ ವ್ಯವಸ್ಥೆ ಕಲ್ಪಿಸಿದೆ ಎಂದರು.
ಸಂಘಟನೆಯ ಮುಖಂಡರಾದ ನವಾಝ್ ಕಾವೂರು, ಹನೀಫ್ ಕಾಟಿಪಳ್ಳ, ಖಾದರ್ ಕುಳಾಯಿ, ಸಯೀದ್ ಕಿನ್ಯ ಮತ್ತಿತರರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.







