ಭಾರತದ ಅಲ್ಪಸಂಖ್ಯಾತರ ವಿರೋಧಿ ಶೋಷಣೆಯ ಕುರಿತ ಅಮೆರಿಕದ ವರದಿಗೆ ಐಎಎಂಸಿ ಶ್ಲಾಘನೆ
PHOTO SDOURCE: TWITTER/@IAMCouncil
ವಾಷಿಂಗ್ಟನ್, ಜೂ.3: ಭಾರತದಲ್ಲಿ ಧಾರ್ಮಿಕ ಸ್ವಾತಂತ್ರ್ಯದ ಭಾರೀ ಉಲ್ಲಂಘನೆ ಮತ್ತು 280 ಮಿಲಿಯನ್ ಧಾರ್ಮಿಕ ಅಲ್ಪಸಂಖ್ಯಾತರ ಕಿರುಕುಳದ ಬಗ್ಗೆ ವಿವರಿಸುವ ಅಮೆರಿಕದ ವಿದೇಶಾಂಗ ಇಲಾಖೆಯ 2021ರ ಅಂತರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ ವರದಿಯನ್ನು ಇಂಡಿಯನ್ ಅಮೆರಿಕನ್ ಮುಸ್ಲಿಮ್ ಕೌನ್ಸಿಲ್(ಐಎಎಂಸಿ) ಸ್ವಾಗತಿಸಿದೆ.
ಐಎಎಂಸಿ ಭಾರತದ ಸಾಂವಿಧಾನಿಕ ಮೌಲ್ಯಗಳಾದ ಬಹುತ್ವ ಮತ್ತು ಪ್ರಜಾಪ್ರಭುತ್ವವನ್ನು ಉಳಿಸಿಕೊಳ್ಳಲು ಸಮರ್ಪಿತವಾದ ವಕಾಲತ್ತು ಸಂಸ್ಥೆಯಾಗಿದೆ. ಪ್ರಪಂಚದಾದ್ಯಂತ ಧಾರ್ಮಿಕ ಸ್ವಾತಂತ್ರ್ಯ ಮತ್ತು ಧಾರ್ಮಿಕ ಅಲ್ಪಸಂಖ್ಯಾತರ ಹಕ್ಕುಗಳು ಹೇಗೆ ಅಪಾಯದಲ್ಲಿವೆ ಎಂಬುದನ್ನು ವರದಿಯು ದಾಖಲಿಸುತ್ತದೆ. ವಿಶ್ವದ ಅತೀ ದೊಡ್ಡ ಪ್ರಜಾಪ್ರಭುತ್ವ ಮತ್ತು ಬಹು ವೈವಿಧ್ಯತೆಗಳ ನಂಬಿಕೆಯ ನೆಲೆಯಾಗಿರುವ ಭಾರತದಲ್ಲಿ ಜನತೆ ಮತ್ತು ಪೂಜಾಸ್ಥಳಗಳ ಮೇಲಿನ ದಾಳಿಗಳ ಹೆಚ್ಚಳವನ್ನು ಗಮನಿಸಿದ್ದೇವೆ ಎಂದು ವರದಿಯ ಬಗ್ಗೆ ವಿದೇಶಾಂಗ ಕಾರ್ಯದರ್ಶಿ ಆ್ಯಂಟನಿ ಬ್ಲಿಂಕೆನ್ ಪ್ರತಿಕ್ರಿಯಿಸಿದ್ದರು. ಕಠೋರವಾದ ಮತಾಂತರ ವಿರೋಧಿ ಕಾನೂನುಗಳು, ಗೋ ರಕ್ಷಕತ್ವ ಮತ್ತು ಗುಂಪು ಹತ್ಯೆಗಳು, ತ್ರಿಪುರಾ ರಾಜ್ಯದಲ್ಲಿ ಮುಸ್ಲಿಂ ವಿರೋಧಿ ದಾಳಿಗಳು, ಕಾಲ್ಪನಿಕ ಅಪರಾಧಗಳಿಗಾಗಿ ಹಿಂದುಯೇತರರನ್ನು ಬಂಧಿಸುವುದು ಮತ್ತು ಮಸೀದಿ ಧ್ವಂಸ ವಿಷಯಗಳನ್ನು ಒಳಗೊಂಡಿರುವ ಜೊತೆಗೆ, ವರದಿಯಲ್ಲಿ ಹಲವಾರು ಹಿಂದು ಉಗ್ರಗಾಮಿ ನಾಯಕರ ಹೆಸರನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಇದರಲ್ಲಿ ಯತಿ ನರಸಿಂಘಾನಂದ, ಹಿಂದು ಮಹಾಸಭಾದ ಪ್ರಧಾನ ಕಾರ್ಯದರ್ಶಿ ಸಾಧ್ವಿ ಅನ್ನಪೂರ್ಣ, ವಿಶ್ವ ಹಿಂದು ಸಮ್ಮೇಳನ ನಾಯಕ ಸ್ವಾಮಿ ಪರಮಾತ್ಮಾನಂದ ಹಾಗೂ ನರೇಂದ್ರ ಮೋದಿಯವರ ನಿಕಟ ಆಪ್ತ ಉತ್ತರಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ಹೆಸರಿದೆ. ಧಾರ್ಮಿಕ ಅಲ್ಪಸಂಖ್ಯಾತರ ಹಕ್ಕುಗಳಿಗೆ ಧಕ್ಕೆಯಾಗಿರುವ ದೇಶಗಳ ಪಟ್ಟಿಯಲ್ಲಿ ಭಾರತವನ್ನು ಚೀನಾ, ಮ್ಯಾನ್ಮಾರ್, ನೈಜೀರಿಯಾ, ಎರಿಟ್ರಿಯಾ, ಅಫ್ಘಾನಿಸ್ತಾನ ಹಾಗೂ ಇತರ ದೇಶಗಳೊಂದಿಗೆ ಹೆಸರಿಸಿ ಬ್ಲಿಂಕೆನ್ ನೀಡಿರುವ ಹೇಳಿಕೆಯನ್ನೂ ಸ್ವಾಗತಿಸಲಾಗುವುದು. ಅಲ್ಲದೆ, ಜನರು ಮತ್ತು ಪ್ರಾರ್ಥನಾ ಮಂದಿರದ ಮೇಲಿನ ದಾಳಿ ಹೆಚ್ಚುತ್ತಿರುವುದನ್ನು ಭಾರತ ಸರಕಾರದ ಅಧಿಕಾರಿಗಳು ಕಡೆಗಣಿಸಿದ್ದಾರೆ ಅಥವಾ ಬೆಂಬಲಿಸುತ್ತಿದ್ದಾರೆ ಎಂಬ ಅಂತರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯಕ್ಕಾಗಿನ ಅಮೆರಿಕದ ಜಾಗತಿಕ ರಾಯಭಾರಿ ರಷದ್ ಹುಸೈನ್ ಹೇಳಿಕೆಯನ್ನೂ ಶ್ಲಾಘಿಸಲಾಗುವುದು ಎಂದು ಐಎಎಂಸಿ ಹೇಳಿದೆ.
ಹಿಂದು ಉಗ್ರವಾದದ ಅಪಾಯಕಾರಿ ಪರಿಣಾಮಗಳ ಕುರಿತ ಸಂಪೂರ್ಣ ಮಾಹಿತಿಯನ್ನು ವರದಿ ಒಳಗೊಂಡಿದೆ. ಹಿಂದುತ್ವ ಎಂಬುದು ಭಾರತದ ಪ್ರಜಾಪ್ರಭುತ್ವಕ್ಕೆ ಪ್ರಮುಖ ಅಪಾಯಕಾರಿ ಬೆದರಿಕೆ ಎಂಬುದನ್ನು ಬೈಡನ್ ಆಡಳಿತ ಈಗ ಔಪಚಾರಿಕವಾಗಿ ಗುರುತಿಸಿರುವುದು ಗಮನಾರ್ಹವಾಗಿದೆ ಎಂದು ಐಎಎಂಸಿ ಅಧ್ಯಕ್ಷ ಸಯಿದ್ ಅಲಿ ಹೇಳಿದ್ದಾರೆ. ಭಾರತದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರ ಶೋಷಣೆಯ ವಿಷಯದ ಬಗ್ಗೆ ಮೌನ ಮುರಿದು ಸಾರ್ವಜನಿಕವಾಗಿ ಆತಂಕ ವ್ಯಕ್ತಪಡಿಸಿರುವುದಕ್ಕೆ ಬ್ಲಿಂಕೆನ್ ಹಾಗೂ ಹುಸೈನ್ರನ್ನು ಶ್ಲಾಘಿಸುತ್ತಿದ್ದೇವೆ. ಇದು ಸರಿಯಾದ ದಿಕ್ಕಿನಲ್ಲಿ ಪ್ರಮುಖ ಹೆಜ್ಜೆಯಾಗಿದೆ ಮತ್ತು ಭಾರತದ 280 ಮಿಲಿಯನ್ ಅಲ್ಪಸಂಖ್ಯಾತರ ರಕ್ಷಣೆಯನ್ನು ಖಾತರಿಪಡಿಸಲು ಅಮೆರಿಕ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ದೀರ್ಘಾವಧಿಯಿಂದ ಬಾಕಿ ಉಳಿದಿರುವ ಚರ್ಚೆಗಳನ್ನು ಆರಂಭಿಸಲು ಅವಕಾಶ ಒದಗಿಸಿದೆ ಎಂದು ಐಎಎಂಸಿ ಕಾರ್ಯನಿರ್ವಾಹಕ ನಿರ್ದೇಶಕ ರಶೀದ್ ಅಹ್ಮದ್ ಪ್ರತಿಕ್ರಿಯಿಸಿದ್ದಾರೆ.
ಭಾರತವನ್ನು ನಿರ್ದಿಷ್ಟ ಕಾಳಜಿಯ ದೇಶ(ಸಿಪಿಸಿ) ಪಟ್ಟಿಯಲ್ಲಿ ಹೆಸರಿಸಿ, ಧಾರ್ಮಿಕ ಸ್ವಾತಂತ್ರ್ಯದ ಉಲ್ಲಂಘನೆಗಾಗಿ ಮತ್ತು ಮುಸ್ಲಿಮ್ ಹಾಗೂ ಕ್ರಿಶ್ಚಿಯನ್ ಅಲ್ಪಸಂಖ್ಯಾತರ ಸರಕಾರಿ ಪ್ರಾಯೋಜಿತ ಶೋಷಣೆಗಾಗಿ ನಿರ್ಬಂಧ ಜಾರಿಗೊಳಿಸಬೇಕು ಎಂದು ಐಎಎಂಸಿ ಅಮೆರಿಕದ ವಿದೇಶಾಂಗ ಇಲಾಖೆ ಹಾಗೂ ಇಲಾಖೆಯ ಕಾರ್ಯದರ್ಶಿ ಬ್ಲಿಂಕೆನ್ರನ್ನು ಆಗ್ರಹಿಸಿದೆ.
IAMC welcomes the statement by U.S. Secretary of State @SecBlinken, calling out India for persecuting its religious minorities during the release of 2021 International Religious Freedom Report which represents a detailed account of massive violations of religious freedom in India pic.twitter.com/OWTnbsqCGe
— Indian American Muslim Council (@IAMCouncil) June 2, 2022