ಅಮೆರಿಕ: ಚರ್ಚ್ ಬಳಿ ಗುಂಡಿನ ದಾಳಿ; 3 ಮಂದಿ ಮೃತ್ಯು
PHOTO: AP
ವಾಷಿಂಗ್ಟನ್, ಜೂ.3: ಅಮೆರಿಕದ ಲೋವಾ ರಾಜ್ಯದ ಚರ್ಚ್ನ ಹೊರಭಾಗದಲ್ಲಿ ವ್ಯಕ್ತಿಯೊಬ್ಬ ನಡೆಸಿದ ಗುಂಡಿನ ದಾಳಿಯಲ್ಲಿ ಇಬ್ಬರು ಮಹಿಳೆಯರು ಮೃತಪಟ್ಟಿದ್ದಾರೆ. ಬಳಿಕ ಆತ ಸ್ವಯಂ ಗುಂಡು ಹಾರಿಸಿಕೊಂಡು ಮೃತಪಟ್ಟಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
ಅಮೆರಿಕದಲ್ಲಿ ಬಂದೂಕು ಲೈಸೆನ್ಸ್ ನಿಯಮ ಬಿಗಿಗೊಳಿಸುವ ಬಗ್ಗೆ ಅಧ್ಯಕ್ಷ ಜೋ ಬೈಡನ್ ಸಂಸತ್ತಿನಲ್ಲಿ ಹೇಳಿಕೆ ನೀಡಿದ ಕೆಲ ಘಂಟೆಗಳ ಬಳಿಕ ಈ ಘಟನೆ ನಡೆದಿದೆ. ಏಮ್ಸ್ ನಗರದ ಪೂರ್ವದಲ್ಲಿರುವ ಕಾರ್ನರ್ಸ್ಟೋನ್ ಚರ್ಚ್ ನಲ್ಲಿ ಕಾರ್ಯಕ್ರಮ ನಡೆಯುತ್ತಿದ್ದಾಗ ಹೊರಭಾಗದಲ್ಲಿ ಗುಂಡಿನ ದಾಳಿ ನಡೆದಿದೆ.
ದಾಳಿಕೋರ ಒಬ್ಬಂಟಿಯಾಗಿದ್ದ ಎಂಬ ಮಾಹಿತಿ ಲಭಿಸಿದೆ. ದಾಳಿಯ ಹಿಂದಿನ ಕಾರಣ ಅಥವಾ ಮೃತ ಮಹಿಳೆಯರು ಮತ್ತು ದಾಳಿಕೋರನ ನಡುವೆ ಸಂಬಂಧವಿತ್ತೇ ಎಂಬ ಬಗ್ಗೆ ಮಾಹಿತಿ ಕಲೆಹಾಕುತ್ತಿದ್ದೇವೆ ಎಂದು ಅಧಿಕಾರಿಗಳು ಹೇಳಿದ್ದಾರೆ. 2022ರಲ್ಲಿ ಅಮೆರಿಕದಲ್ಲಿ ಇದುವರೆಗೆ ಜನಸಾಮಾನ್ಯರನ್ನು ಗುರಿಯಾಗಿಸಿ ಕನಿಷ್ಟ 233 ಗುಂಡಿನ ದಾಳಿ ನಡೆದಿದೆ ಎಂದು ವರದಿಯಾಗಿದೆ.
Next Story