ವಿದ್ಯಾರ್ಥಿಗಳಿಂದ ಪತ್ರಕರ್ತರ ಮೇಲೆ ದಿಗ್ಭಂಧನ ದೂರು ಹಿನ್ನೆಲೆ; ಪತ್ರಕರ್ತರ ವಿರುದ್ಧ ವಿದ್ಯಾರ್ಥಿನಿ ಪ್ರತಿ ದೂರು
ಉಪ್ಪಿನಂಗಡಿ ಕಾಲೇಜಿನಲ್ಲಿ ಹಿಜಾಬ್ ವಿವಾದ

ಉಪ್ಪಿನಂಗಡಿ: ಇಲ್ಲಿನ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಿಜಾಬ್ ವಿವಾದದ ಕುರಿತಾಗಿ ನಡೆಯುತ್ತಿರುವ ಘಟನಾವಳಿಗಳ ಬಗ್ಗೆ ಕಾಲೇಜಿನ ಪ್ರಾಂಶುಪಾಲರಲ್ಲಿ ಮಾಹಿತಿ ಪಡೆಯಲು ತೆರಳಿದ್ದ ಪತ್ರಕರ್ತರ ಮೇಲೆ ವಿದ್ಯಾರ್ಥಿಗಳ ಗುಂಪೊಂದು ದಿಗ್ಭಂಧನ ವಿಧಿಸಿ, ಅವರ ಮೊಬೈಲ್ ಕಸಿದುಕೊಂಡು ಅದರಲ್ಲಿದ್ದ ವಿಡಿಯೋ ಡಿಲಿಟ್ ಮಾಡಿದ್ದಲ್ಲದೆ, ಜೀವ ಬೆದರಿಕೆಯೊಡ್ಡಿರುವ ಬಗ್ಗೆ ಪತ್ರಕರ್ತರೋರ್ವರು ದೂರು ನೀಡಿದ ಮರುದಿನ ವಿದ್ಯಾರ್ಥಿನಿಯೋರ್ವಳು ಮೂವರು ಪತ್ರಕರ್ತರ ವಿರುದ್ಧ ಪ್ರತಿ ದೂರು ನೀಡಿದ್ದಾರೆ.
ಕಾಲೇಜಿನ ಎರಡನೇ ವರ್ಷದ ಬಿ.ಕಾಂ. ವಿದ್ಯಾರ್ಥಿನಿ ಈ ದೂರು ನೀಡಿದ್ದು, ಜೂ.2ರಂದು ಸುಮಾರು 11:30ಕ್ಕೆ ಕಾಲೇಜು ಆವರಣದಲ್ಲಿ ವಿದ್ಯಾರ್ಥಿಗಳಲ್ಲದ ಅಪರಿಚಿತರಾದ ಅಜಿತ್ ಕುಮಾರ್ ಕೆ., ಪ್ರವೀಣ್ ಕುಮಾರ್ ಮತ್ತು ಸಿದ್ದೀಕ್ ನೀರಾಜೆ ಎಂಬವರು ಅಕ್ರಮವಾಗಿ ಪ್ರವೇಶಿಸಿ, ಅವರಲ್ಲಿ ಅಜಿತ್ ಕುಮಾರ್ ಎಂಬಾತ ಜಾತಿ ನಿಂದನೆ ಮಾಡಿ ನನ್ನ ಶಾಲನ್ನು ಎಳೆಯಲು ಯತ್ನಿಸಿದ್ದಾರೆ. ಅಲ್ಲದೆ, ವೀಡಿಯೊ ಮಾಡಿದ್ದಾರೆ. ಈ ವೇಳೆ ನಾನು ನೀವ್ಯಾರು? ನೀವು ಯಾಕೆ ಇಲ್ಲಿ ಬಂದಿದ್ದೀರಿ ಎಂದು ಕೇಳಿದಾಗ "ನೀನು ನಾಳೆಯಿಂದ ಕಾಲೇಜಿಗೆ ಹೇಗೆ ಬರುತ್ತಿ ಎಂಬುದನ್ನು ನಾವು ನೋಡುತ್ತೇವೆ. ವಿಡಿಯೋ ವೈರಲ್ ಮಾಡುತ್ತೇವೆ ಎಂದು ಬೆದರಿಕೆ ಹಾಕಿದ್ದಾರೆ. ಬಳಿಕ ನಾನು ಕ್ಲಾಸ್ ರೂಮ್‍ಗೆ ಹೋಗಿ ನಂತರ ಪ್ರಾಂಶುಪಾಲರಲ್ಲಿ ದೂರು ನೀಡಿದಾಗ ಆ ವ್ಯಕ್ತಿಗಳನ್ನು ಕರೆಯಿಸಿ ಅವರು ಮಾಡಿದ ವೀಡಿಯೊವನ್ನು ಡಿಲೀಟ್ ಮಾಡಿಸಲಾಗಿದೆ. ಈ ಸಂದರ್ಭ ಆ ಮೂವರು ಪತ್ರಕರ್ತರೆಂದು ನನಗೆ ತಿಳಿಯಿತು" ಎಂದು ವಿದ್ಯಾರ್ಥಿನಿ ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುಳ್ಳು ದೂರು: ಸಿದ್ದೀಕ್ ನೀರಾಜೆ
ಇಬ್ಬರು ಪತ್ರಕರ್ತರಿಗೆ ವಿದ್ಯಾರ್ಥಿಗಳ ಗುಂಪು ದಿಗ್ಭಂಧನ ಹಾಕಿ, ವೀಡಿಯೊ ಡಿಲೀಟ್ ಮಾಡಿರುವುದು ಕಾಲೇಜು ಕಟ್ಟಡದೊಳಗೆ. ಆದರೆ ನಾನು ಆ ಬಳಿಕ ಕಾಲೇಜು ಬಳಿ ಬಂದಿದ್ದು, ಕಾಲೇಜಿನೊಳಗೆ ಹೋಗಲು ಕಾಲೇಜು ಕಟ್ಟಡದಿಂದ ಸುಮಾರು 300 ಮೀಟರ್ ದೂರವಿರುವ ಕಾಲೇಜು ಕ್ಯಾಂಪಸ್ ಆವರಣದ ಗೇಟನ್ನು ತೆರೆದು ಎರಡು ಹೆಜ್ಜೆ ಇಡುವಷ್ಟರಲ್ಲೇ ವಿದ್ಯಾರ್ಥಿಗಳ ಗುಂಪು ನನ್ನ ಬಳಿ ಆಕ್ರಮಣಕಾರಿಯಾಗಿ ಓಡಿ ಬಂದು ನನ್ನನ್ನು ತರಾಟೆಗೆ ತೆಗೆದುಕೊಂಡಿದೆ. ನಾನು ಪ್ರಾಂಶುಪಾಲರಲ್ಲಿ ಮಾಹಿತಿಗಾಗಿ ತೆರಳುವವನೆಂದು ಹೇಳಿದರೂ, ನನ್ನನ್ನು ಅಲ್ಲಿಂದಲೇ ವಿದ್ಯಾರ್ಥಿಗಳ ಗುಂಪು ವಾಪಸ್ ಕಳುಹಿಸಿದೆ. ಈ ಘಟನೆಯನ್ನು ನನ್ನಿಂದ ಸುಮಾರು 10 ಮೀಟರ್ ದೂರದಲ್ಲಿದ್ದ ಪೊಲೀಸರು ವೀಡಿಯೊ ಚಿತ್ರೀಕರಣ ಕೂಡಾ ಮಾಡಿದ್ದಾರೆ. ಕಾಲೇಜಿನ ಸಿಸಿ ಟಿವಿಯ ದೃಶ್ಯಾವಳಿಯನ್ನು ಪರಿಶೀಲಿಸಿ ಪೊಲೀಸರು ತನಿಖೆ ನಡೆಸಲಿ, ಈ ವೇಳೆ ನಿಜಾಂಶ ಬಯಲಾಗಲಿದೆ. ಇದೊಂದು ಸುಳ್ಳು ದೂರು ಎಂದು ಪತ್ರಕರ್ತ ಸಿದ್ದೀಕ್ ನೀರಾಜೆ ತಿಳಿಸಿದ್ದಾರೆ.