ರಾಜ್ಯಸಭೆಗೆ 11 ರಾಜ್ಯಗಳಿಂದ 41 ಸದಸ್ಯರ ಅವಿರೋಧ ಆಯ್ಕೆ: ಚುನಾವಣಾ ಆಯೋಗ

ಹೊಸದಿಲ್ಲಿ: ರಾಜ್ಯಸಭೆಗೆ 11 ರಾಜ್ಯಗಳಿಂದ 41 ಮಂದಿ ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾ ಆಯೋಗ ಶಕ್ರವಾರ ಪ್ರಕಟಿಸಿದೆ.
ಮುಂದಿನ ವಾರ ಸಂಸತ್ತಿನ ಮೇಲ್ಮನೆಗೆ ನಡೆಯುವ ಚುನಾವಣೆಯಲ್ಲಿ ನಾಮಪತ್ರಗಳನ್ನು ವಾಪಾಸು ಪಡೆಯಲು ಜೂನ್ 3 ಕೊನೆಯ ದಿನವಾಗಿತ್ತು.
ಒಟ್ಟು 15 ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳ 57 ಸ್ಥಾನಗಳಿಗೆ ಈ ಹಂತದಲ್ಲಿ ಚುನಾವಣೆ ನಿಗದಿಯಾಗಿತ್ತು. ಹರ್ಯಾಣ, ರಾಜಸ್ಥಾನ, ಕರ್ನಾಟಕ ಹಾಗೂ ಮಹಾರಾಷ್ಟ್ರದಲ್ಲಿ ಕೊನೆಯ ದಿನ ಕೂಡಾ ಯಾರೂ ನಾಮಪತ್ರ ವಾಪಾಸು ಪಡೆಯದ ಕಾರಣ ತುರುಸಿನ ಸ್ಪರ್ಧೆ ಏರ್ಪಟ್ಟಿದೆ.
ಉತ್ತರ ಪ್ರದೇಶದಿಂದ 11 ಮಂದಿ, ತಮಿಳುನಾಡಿನಿಂದ ಆರು, ಬಿಹಾರದಿಂದ ಐದು, ಆಂಧ್ರಪ್ರದೇಶದಿಂದ ನಾಲ್ಕು, ಮಧ್ಯಪ್ರದೇಶ ಹಾಗೂ ಒಡಿಶಾದಿಂದ ತಲಾ ಮೂರು, ಛತ್ತೀಸ್‍ಗಢ, ಪಂಜಾಬ್, ತೆಲಂಗಾಣ ಮತ್ತು ಜಾರ್ಖಂಡ್‍ನಿಂದ ತಲಾ ಎರಡು ಹಾಗೂ ಉತ್ತರಾಖಂಡದಿಂದ ಒಬ್ಬರು ಅವಿರೋಧ ಆಯ್ಕೆ ಆಗಿದ್ದಾರೆ.
ಕಾಂಗ್ರೆಸ್‍ನಿಂದ ಪಿ.ಚಿದಂಬರಂ ಮತ್ತು ರಾಜೀವ್ ಶುಕ್ಲಾ, ಬಿಜೆಪಿಯಿಂದ ಸುಮಿತ್ರಾ ವಾಲ್ಮೀಕಿ ಮತ್ತು ಕವಿತಾ ಪಾಟಿದಾರ್, ಮಾಜಿ ಕಾಂಗ್ರೆಸ್ ಮುಖಂಡ ಕಪಿಲ್ ಸಿಬಾಲ್, ರಾಷ್ಟ್ರೀಯ ಜನತಾ ದಳದ ಮಿಸಾ ಭಾರ್ತಿ ಮತ್ತು ಆರ್‌ಎಲ್‍ಡಿಎ ಜಯಂತ್ ಚೌಧರಿ ಮೇಲ್ಮನೆಗೆ ಅವಿರೋಧವಾಗಿ ಆಯ್ಕೆಯಾದವರಲ್ಲಿ ಸೇರಿದ್ದಾರೆ.
ರಾಜಸ್ಥಾನದಲ್ಲಿ ನಾಲ್ಕು ಹಾಗೂ ಹರ್ಯಾಣದ ಎರಡು ಸ್ಥಾನಗಳಿಗೆ ಸ್ಪರ್ಧೆ ಇದೆ. ರಾಜಸ್ಥಾನದಲ್ಲಿ ಕಾಂಗ್ರೆಸ್ ಎಲ್ಲ ಶಾಸಕರನ್ನು ಉದಯಪುರದ ಹೋಟೆಲ್‍ನಲ್ಲಿ ಇರಿಸಿದೆ. ಅಂತೆಯೇ ಛತ್ತೀಸ್‍ಗಢದಲ್ಲೂ ಕಾಂಗ್ರೆಸ್ ಶಾಸಕರು ರಾಯಪುರ ಹೋಟೆಲ್‍ನಲ್ಲಿ ಬೀಡು ಬಿಟ್ಟಿದ್ದಾರೆ.