ಕುಣಿಗಲ್ | ಸರಣಿ ಅಪಘಾತಕ್ಕೆ ಇಬ್ಬರು ಬಲಿ: 10 ಮಂದಿಗೆ ಗಾಯ

ತುಮಕೂರು, ಜೂ.4: ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಢಿಕ್ಕಿ ಹೊಡೆದು ಬಳಿಕ ಪಕ್ಕದಲ್ಲಿ ಸಂಚರಿಸುತ್ತಿದ್ದ ಟೆಂಪೋ ಟ್ರಾವೆಲರ್ ಮತ್ತು ಬುಲೆಟ್ ಬೈಕ್ ಒಂದಕ್ಕೆ ಢಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಇಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ಕುಣಿಗಲ್ ತಾಲೂಕಿನ ಬೇಗೂರು ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಶನಿವಾರ ಮುಂಜಾವ ನಡೆದಿದೆ. ಈ ಅಪಘಾತದಲ್ಲಿ ಇತರ 10 ಮಂದಿ ಗಾಯಗೊಂಡಿದ್ದಾರೆ.
ಮೃತರಲ್ಲಿ ಓರ್ವನನ್ನು ಹಾಸನ ಜಿಲ್ಲೆಯ ಹೊಳೇನರಸೀಪುರ ತಾಲೂಕು ನಿವಾಸಿ ಸುನೀಲ್(30) ಎಂದು ಗುರುತಿಸಲಾಗಿದ್ದರೆ, ಇನ್ನೋರ್ವನ ಗುರುತು ಪತ್ತೆಯಾಗಿಲ್ಲ.
ಟಿಟಿಯಲ್ಲಿದ್ದ ನಾಗಮಂಗಲ ತಾಲೂಕಿನ ರಾಮೇಗೌಡ ಎಂಬವರ ಕುಟುಂಬಕ್ಕೆ ಸೇರಿದ 8 ಮಂದಿ ಹಾಗೂ ಬುಲೆಟ್ ಬೈಕಿನಲ್ಲಿದ್ದ ಇಬ್ಬರು ಗಾಯಗೊಂಡಿದ್ದಾರೆ. ಅವರನ್ನು ಆದಿ ಚುಂಚನಗಿರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಬೆಂಗಳೂರಿನಿಂದ ಹಾಸನ ಕಡೆಗೆ ಹೊರಟಿದ್ದ ಕಾರು ನಾಗಮಂಗಲದಿಂದ ಬೆಂಗಳೂರಿಗೆ ಮದುವೆ ದಿಬ್ಬಣ ಹೊರಟಿದ್ದ ಟೆಂಪೋ ಟ್ರಾವೆಲರ್ ಗೆ ಢಿಕ್ಕಿ ಹೊಡೆದಿದೆ ಎನ್ನಲಾಗಿದೆ. ಅಪಘಾತತ ತೀವ್ರತೆಗೆ ಕಾರು ಸಂಪೂರ್ಣ ಜಖಂಗೊಂಡಿದೆ.
ಕುಣಿಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.







