ಪಠ್ಯ ಪರಿಷ್ಕರಣೆ ಸಮಿತಿ ವಿಸರ್ಜನೆ ಅತ್ಯಂತ ಚಾಣಾಕ್ಷ, ಅಷ್ಟೇ ಅಪಾಯಕಾರಿ ನಡೆ: ಶಿಕ್ಷಣ ತಜ್ಞ ಡಾ.ನಿರಂಜನಾರಾಧ್ಯ

ಬೆಂಗಳೂರು, ಜೂ.4: ಪಠ್ಯ ಪರಿಷ್ಕರಣೆ ಸಮಿತಿಯ ವಿಸರ್ಜನೆ ಅತ್ಯಂತ ಚಾಣಾಕ್ಷ, ಅಷ್ಟೇ ಅಪಾಯಕಾರಿ ನಡೆ ಎಂದು ಶಿಕ್ಷಣ ತಜ್ಞ ಡಾ.ನಿರಂಜನಾರಾಧ್ಯ ವಿ.ಪಿ. ಹೇಳಿದ್ದಾರೆ.
ತಮಗೆ ಬೇಕಾದುದೆಲ್ಲವನ್ನು ವ್ಯವಸ್ಥಿತವಾಗಿ ಮಾಡಿ, ಅದನ್ನು ಹಾಗೆಯೆ ಉಳಿಸಿಕೊಂಡು ಪಠ್ಯ ಪರಿಷ್ಕರಣೆ ಸಮಿತಿಯನ್ನು ವಿಸರ್ಜಿಸಿರುವುದು ಕೇವಲ ಕಣ್ಣೊರೆಸುವ ತಂತ್ರ. ಟಿಪ್ಪಣಿಯಲ್ಲಿ ಎಲ್ಲಿಯೂ ಆಗಿರುವ ತಪ್ಪನ್ನು ಒಪ್ಪಿಕೊಳ್ಳುವುದಾಗಲಿ ಅಥವಾ ಸಂವಿಧಾನಕ್ಕೆ ವಿರುದ್ಧವಾಗಿ ವೈದೀಕರಣ ನೆಲೆಯಲ್ಲಿ ಸೇರಿಸಿರುವ ತಿರುಚಿರುವ ಪಾಠಗಳನ್ನು ಕೈಬಿಡುವ ಬಗ್ಗೆಯಾಗಲಿ ಪ್ರಸ್ತಾಪವಾಗಿಲ್ಲ ಎಂದು ತಿಳಿಸಿದ್ದಾರೆ.
ಯಾವುದೇ ಪ್ರಜಾಸತ್ತಾತ್ಮಕ ವಿಧಾನವಾಗಲಿ ಅಥವಾ ಪಠ್ಯ ಪುಸ್ತಕ ರಚನೆ/ ಪರಿಷ್ಕರಣೆಗೆ ಅಗತ್ಯವಾದ ಒಂದು ಶಿಕ್ಷಣ ಶಾಸ್ತ್ರೀಯ ಕ್ರಮವನ್ನಾಗಲಿ ಅನುಸರಿಸದ ಪ್ರಕ್ರಿಯೆ ಮೂಲಕ ಪರಿಷ್ಕರಿಸಿದ ಪುಸ್ತಕಗಳನ್ನು ಆಧರಿಸಿ ಮಕ್ಕಳಿಗೆ ಕಲಿಸುವುದು ಪ್ರಜಾಪ್ರಭುತ್ವಕ್ಕೆ ಹಾಗೂ ಸಂವಿಧಾನಕ್ಕೆ ಮಾಡುವ ಅಪಚಾರ. ಆದ್ದರಿಂದ ಈ ನಿಟ್ಟಿನಲ್ಲಿ ನಡೆಯುತ್ತಿರುವ ಸಂವಿಧಾನ ಪರವಾದ ಹೋರಾಟ ಮುಂದುವರಿಯಬೇಕು ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಈ ಕುರಿತಂತೆ ನಾಲ್ಕು ಹಕ್ಕೊತ್ತಾಯವನ್ನು ಅವರು ಮುಂದಿಟ್ಟಿದ್ದಾರೆ
1. ಪರಿಷ್ಕರಣೆ ನಿಯಮಬಾಹಿರ ಹಾಗೂ ಸಂವಿಧಾನ ವಿರೋಧಿಯಾದ ಕಾರಣ, ಪರಿಷ್ಕರಣೆಯ ಹೆಸರಲ್ಲಿ ಸೇರಿಸಿರುವ ಎಲ್ಲ ಕೋಮುವಾದಿ ಪಾಠಗಳು ಹಾಗೂ ದುರುದ್ದೇಶದಿಂದ ಬದಲಿಸಿರುವ ಶೀರ್ಷಿಕೆ, ಪದಪುಂಜ, ವಾಕ್ಯ, ಪ್ಯಾರಾ ಇತ್ಯಾದಿಗಳು ಸಂವಿಧಾನದ ಮೂಲ ಆಶಯಕ್ಕೆ ಧಕ್ಕೆ ತರುವಂತಿರುವುದರಿಂದ, ಸಂಪೂರ್ಣ ಪ್ರಕ್ರಿಯೆಯನ್ನು ರದ್ದುಗೊಳಿಸಬೇಕು.
2. ಪರಿಷ್ಕೃತ ಪುಸ್ತಕಗಳ ವಿತರಣೆ ಸ್ಥಗಿತಗೊಳಿಸಿ ಎಲ್ಲವನ್ನು ಹಿಂಪಡೆಯಬೇಕು
3. ಈ ಹಿಂದೆ ಇದ್ದ ಪುಸ್ತಕಗಳನ್ನು ಯಥಾವತ್ತಾಗಿ ಮುಂದುವರಿಸಬೇಕು.
4. ಪಠ್ಯಪುಸ್ತಕ ಪರಿಷ್ಕರಣೆ ಹೆಸರಿನ ಈ ಪ್ರಹಸನದಲ್ಲಿ ಆಗಿರುವ ಲೋಪಗಳನ್ನು ಅಧ್ಯಯನ ಮಾಡಿ ವರದಿ ಸಲ್ಲಿಸಲು ಒಂದು ಸ್ವತಂತ್ರ ಶಿಕ್ಷಣ ಹಾಗೂ ವಿಷಯ ತಜ್ಞರ ಸಮಿತಿಯನ್ನು ರಚಿಸಬೇಕು.







