ಪಡುಬಿದ್ರಿ: ಆಯುಧಗಳೊಂದಿಗೆ ಕೇಕ್ ಕತ್ತರಿಸಿದ ಆರೋಪ; ಮೂವರ ಬಂಧನ

ಪಡುಬಿದ್ರಿ: ಮಾರಕ ಆಯುಧಗಳೊಂದಿಗೆ ಕೇಕ್ ಕತ್ತರಿಸುವ ಮೂಲಕ ಸಾರ್ವಜನಿಕರಲ್ಲಿ ಭಯ ಭೀತಿ ಹುಟ್ಟಿಸಿರುವ ಆರೋಪದಡಿ ಮೂವರು ಆರೋಪಿಗಳನ್ನು ಪಡುಬಿದ್ರಿ ಪೊಲೀಸರು ಬಂಧಿಸಿದ್ದಾರೆ
ಪಡುಬಿದ್ರೆ ಕಾರ್ಕಳ ರಸ್ತೆಯ ಜಿತೆಂದ್ರ ಶೆಟ್ಟಿ(52), ಪಡುಬಿದ್ರೆ ಬೀಚ್ ರಸ್ತೆಯ ಗಣೇಶ ಪೂಜಾರಿ (50), ಫಲಿಮಾರು ಅವರಾಲುವಿನ ಶರತ್ ಶೆಟ್ಟಿ ಯಾನೆ ಪುಟ್ಟ,(26) ಬಂಧಿತ ಆರೋಪಿಗಳು. ಉಳಿದ ಆರೋಪಿಗಳಾದ ಫಲಿಮಾರು ಹೊಸಾಗ್ಮೆ ಸೂರಜ್ ಸಾಲ್ಯಾನ್(25), ಪಡುಬಿದ್ರೆಯ ತನುಜ್ ಎಂ ಕರ್ಕೇರ, (25), ಅನ್ವೀಶ್ (23), ಎಲ್ಲೂರು ಕೆಮುಂಡೇಲುವಿನ ನಿರಂಜನ್ ಶೆಟ್ಟಿಗಾರ್(31) ಎಂಬವರು ತಲೆಮರೆಸಿಕೊಂಡಿದ್ದಾರೆ.
ಪಾದೆಬೆಟ್ಟು ಗ್ರಾಮದ ಪಡುಬಿದ್ರಿ ಕಾರ್ಕಳ ರಸ್ತೆಯ ಆಶಾ ಸದನ ನಿವಾಸಿ ಜೀತು ಯಾನೆ ಜಿತೇಂದ್ರ ಶೆಟ್ಟಿ ಎಂಬಾತ ಈ ಹಿಂದೆ ಪಡುಬಿದ್ರಿ ಠಾಣೆಯ ಪ್ರಕರಣವೊಂದರ ಆರೋಪಿಯಾಗಿದ್ದು, ಕೆಲವು ಹಿಂಬಾಲಕರನ್ನು ಜೊತೆಯಲ್ಲಿ ಸೇರಿಸಿಕೊಂಡು ರೌಡಿ ಚಟುವಟಿಕೆಯನ್ನು ನಡೆಸುತ್ತಿದ್ದರೆನ್ನಲಾಗಿದೆ
ಕಳೆದ ಎರಡು ದಿನಗಳಿಂದ ಸ್ಥಳೀಯವಾಗಿ ಸಾಮಾಜಿಕ ಜಾಲತಾಣವಾದ ವಾಟ್ಸಪ್ ನಲ್ಲಿ ಜೀತು ಜೊತೆ ಈ ಹಿಂದೆ ಕೊಲೆಯತ್ನ ಪ್ರಕರಣದ ಆರೋಪಿಗಳಾಗಿದ್ದ ಸೂರಜ್, ತನುಜ್ , ಅನ್ವೀಶ್, ಗಣೇಶ ಪೂಜಾರಿ, ನಿರಂಜನ್ ಶೆಟ್ಟಿಗಾರ್, ಶರತ್ ಶೆಟ್ಟಿ ಒಟ್ಟಾಗಿ ನಿರಂಜನ್ ಶೆಟ್ಟಿಗಾರ್ ನ ಬರ್ತ್ ಡೇ ಸೆಲೇಬ್ರೇಷನ್ ಮಾಡುವ ಫೊಟೋ ಮತ್ತು ವೀಡಿಯೋ ವೈರಲ್ ಆಗಿತ್ತು.
ಮೇ 30 ರಂದು ರಾತ್ರಿ ಬರ್ತ್ ಡೇ ಕೇಕ್ ನ ಪಕ್ಕದಲ್ಲಿ ಒಂದು ಹರಿತವಾದ ತಲವಾರನ್ನು ಮತ್ತು ಇನ್ನೊಂದು ಪಕ್ಕದಲ್ಲಿ ಕೊಡಲಿ ರೀತಿಯ ಆಯುಧವನ್ನು ಇಟ್ಟು ಫೊಟೋ ತೆಗೆದಿರುವುದು ಮತ್ತು ವೀಡಿಯೋದಲ್ಲಿ ನಿರಂಜನ್ ಶೆಟ್ಟಿಗಾರನು ತಲವಾರಿನಿಂದ ಕೇಕ್ ಕಟ್ ಮಾಡಿ ಸಂಭ್ರಮ ಆಚರಣೆ ಮಾಡುತ್ತಿರುವುದು ಕಂಡು ಬಂದಿತ್ತು.
ಉಳಿದವರು ಅವನ ಅಕ್ಕಪಕ್ಕದಲ್ಲಿ ನಿಂತು ಸಂಭ್ರಮ ಆಚರಣೆ ಮಾಡುತ್ತಿರುವುದು ಕಂಡು ಬಂದಿದೆ. ಫೊಟೋ ಮತ್ತು ವೀಡಿಯೋ ಸ್ಥಳೀಯವಾಗಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದ್ದು, ವೀಡಿಯೋ ಮತ್ತು ಫೊಟೋವನ್ನು ಜೀತು ಶೆಟ್ಟಿ ಮತ್ತವರ ಜೊತೆಯಲ್ಲಿದ್ದವರು ಮಾರಕ ಆಯುಧಗಳನ್ನು ಸ್ವಾಧೀನದಲ್ಲಿ ಇಟ್ಟುಕೊಂಡು ಮತ್ತು ಸಾರ್ವಜನಿಕರಿಗೆ ಭಯಭೀತಿ ಹುಟ್ಟಿಸುವ ಮತ್ತು ಪ್ರಚೋದನೆ ನೀಡುವ ಉದ್ದೇಶದಿಂದ ಆಯುಧಗಳ ಪ್ರದರ್ಶನವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟು ಭಯಬೀತಿ ಉಂಟು ಮಾಡುವ ಕೃತ್ಯ ಎಸಗಿರುವುದಾಗಿ ದೂರಲಾಗಿದೆ.
ಈ ಹಿನ್ನೆಲೆಯಲ್ಲಿ ಜಿತೇಂದ್ರ ಶೆಟ್ಟಿಯ ಮನೆಯನ್ನು ಶೋಧನೆ ನಡೆಸಿ ಮಾರಕ ಆಯುಧಗಳಾದ ಕಬ್ಬಿಣದ ಮಚ್ಚು, ಕಬ್ಬಿಣದ ತಲವಾರ್, ಮತ್ತು ಕಬ್ಬಿಣದ ಕೊಡಲಿಯನ್ನು ಸ್ವಾಧಿನಪಡಿಸಿಕೊಂಡು, ಮೂವರನ್ನು ಬಂಧಿಸಲಾಗಿದೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
