ಮಾಡೂರು | ಚಿಟ್ ಫಂಡ್ ವಂಚನೆ: ವೃದ್ಧ ಆತ್ಮಹತ್ಯೆ

ಉಳ್ಳಾಲ, ಜೂ.4: ಚಿಟ್ ಫಂಡ್ ವ್ಯವಹಾರ ನಡೆಸುತ್ತಿದ್ದ ವೃದ್ಧರೋರ್ವರಿಗೆ ಇಬ್ಬರು ಚಿಟ್ ಫಂಡ್ ಹಣ ಮರಳಿಸದೆ ಮೋಸ ಮಾಡಿದ್ದರಿಂದ ಬೇಸತ್ತು ವೃದ್ಧರೊಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಇಂದು ಬೆಳಗ್ಗೆ ಮಾಡೂರು ಶಾಲೆ ಬಳಿ ನಡೆದಿರುವುದು ವರದಿಯಾಗಿದೆ.
ಕೋಟೆಕಾರು ಗ್ರಾಮದ ಮಾಡೂರು ಸರಕಾರಿ ಶಾಲೆಯ ಬಳಿಯ ನಿವಾಸಿ ಜಯರಾಮ ಶೆಟ್ಟಿ(71) ಆತ್ಮಹತ್ಯೆ ಮಾಡಿಕೊಂಡವರು. ಅವರ ಮೃತದೇಹ ಇಂದು ಬೆಳಗ್ಗೆ ಮನೆಯ ಕೋಣೆಯೊಳಗೆ ನೈಲಾನ್ ಹಗ್ಗದಿಂದ ಕುತ್ತಿಗೆಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಪತ್ನಿ ಲೀನಾ ಜೆ. ಶೆಟ್ಟಿ ಬೆಳಗ್ಗೆ ಚಹಾ ಕೊಡಲೆಂದು ಹೋಗುವಾಗ ಪ್ರಕರಣ ಬೆಳಕಿಗೆ ಬಂದಿದೆ.
ಜಯರಾಮ್ ಶೆಟ್ಟಿ ಅವರು ಮಾಡೂರು ಬಸ್ಸು ತಂಗುದಾಣದ ಬಳಿಯ ಪಂಚಾಯತ್ ಕಟ್ಟಡದ ಅಂಗಡಿಯಲ್ಲಿ ಸೀಯಾಳ ವ್ಯಾಪಾರಿಯಾಗಿದ್ದು ,ಚಿಟ್ ಫಂಡ್ ವ್ಯವಹಾರವನ್ನೂ ನಡೆಸುತ್ತಿದ್ದರೆನ್ನಲಾಗಿದೆ. ಇಬ್ಬರು ಫಂಡ್ ಹಣ ಮರಳಿಸದೆ ಮೋಸ ಮಾಡಿದ್ದರಿಂದ, ಜಯರಾಮ್ ಶೆಟ್ಟಿ ತೀರ ನಷ್ಟ ಅನುಭವಿಸಿದ್ದು, ಇದೇ ಚಿಂತೆಯಲ್ಲೇ ಅವರು ನೇಣು ಬಿಗಿದು ಆತ್ಮ ಹತ್ಯೆಗೈದಿರುವುದಾಗಿ ಅವರ ಪತ್ನಿ ಕೋಟೆಕಾರ್ ಗ್ರಾಪಂ ಮಾಜಿ ಸದಸ್ಯೆ ಲೀನಾ ಪೊಲೀಸರಿಗೆ ದೂರು ನೀಡಿದ್ದಾರೆ.
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.







