177 ಕಾಶ್ಮೀರಿ ಪಂಡಿತ್ ಶಿಕ್ಷಕರನ್ನು ಸುರಕ್ಷಿತ ಸ್ಥಳಗಳಿಗೆ ವರ್ಗಾಯಿಸಲು ಸರಕಾರ ಆದೇಶ
ಉದ್ದೇಶಿತ ಹತ್ಯೆ ಪ್ರಕರಣ ಹೆಚ್ಚಳ

Photo Credit: PTI
ಶ್ರೀನಗರ: ಕಾಶ್ಮೀರದಲ್ಲಿ ಉದ್ದೇಶಿತ ಹತ್ಯೆಗಳು ಆತಂಕಕಾರಿಯಾಗಿ ಹೆಚ್ಚಳವಾಗುತ್ತಿರುವ ಮಧ್ಯೆ ಶ್ರೀನಗರದಲ್ಲಿ ನಿಯೋಜಿಸಲಾದ 177 ಕಾಶ್ಮೀರಿ ಪಂಡಿತ್ ಶಿಕ್ಷಕರನ್ನು ಸುರಕ್ಷಿತ ಸ್ಥಳಗಳಿಗೆ ವರ್ಗಾಯಿಸಲು ಸರಕಾರ ಆದೇಶಿಸಿದೆ. ತಮ್ಮನ್ನು ಸ್ಥಳಾಂತರಿಸುವಂತೆ ಪಂಡಿತರು ಬೇಡಿಕೆಯನ್ನು ಮುಂದಿಟ್ಟಿದ್ದರು.
ಕಾಶ್ಮೀರಿ ಪಂಡಿತ್ ಸಮುದಾಯ ಹಾಗೂ ವಲಸೆ ಕಾರ್ಮಿಕರನ್ನು ಗುರಿಯಾಗಿಸಿಕೊಂಡು ಸರಣಿ ಭಯೋತ್ಪಾದಕ ದಾಳಿಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಪ್ರಕ್ಷುಬ್ಧ ಕೇಂದ್ರಾಡಳಿತ ಪ್ರದೇಶದಲ್ಲಿ ಭದ್ರತಾ ಪರಿಸ್ಥಿತಿಯನ್ನು ಅವಲೋಕಿಸಲು ಗೃಹ ಸಚಿವ ಅಮಿತ್ ಶಾ ಅವರು ಉನ್ನತ ಮಟ್ಟದ ಸಭೆಯ ಅಧ್ಯಕ್ಷತೆ ವಹಿಸಿದ ಒಂದು ದಿನದ ನಂತರ ಈ ಆದೇಶ ಹೊರಡಿಸಲಾಗಿದೆ.
2012 ರಲ್ಲಿ ಪ್ರಧಾನ ಮಂತ್ರಿಗಳ ವಿಶೇಷ ಪ್ಯಾಕೇಜ್ ಅಡಿಯಲ್ಲಿ ಉದ್ಯೋಗಿಯಾಗಿದ್ದ ಕಾಶ್ಮೀರಿ ಪಂಡಿತರು ಮೇ 12 ರಂದು ಮಧ್ಯ ಕಾಶ್ಮೀರದ ಬುದ್ಗಾಮ್ ಜಿಲ್ಲೆಯ ಚದೂರ ಪ್ರದೇಶದಲ್ಲಿ ಭಯೋತ್ಪಾದಕರ ಗುಂಡಿಗೆ ಬಲಿಯಾದ ರಾಹುಲ್ ಭಟ್ ಅವರ ಹತ್ಯೆಯ ನಂತರ ಪ್ರತಿಭಟನೆಗಳನ್ನು ನಡೆಸುತ್ತಿದ್ದು, ಈ ವೇಳೆ ಸಾಮೂಹಿಕವಾಗಿ ವಲಸೆ ಹೋಗುವ ಬೆದರಿಕೆ ಹಾಕಿದ್ದರು.
ಭಟ್ ಅವರ ಹತ್ಯೆಯ ನಂತರ ವಿವಿಧ ಸ್ಥಳಗಳಲ್ಲಿ ಸುಮಾರು 6,000 ಉದ್ಯೋಗಿಗಳು ಪ್ರತಿಭಟನೆಯನ್ನು ನಡೆಸಿದ್ದರು. ತಮ್ಮನ್ನು ಕಣಿವೆಯ ಹೊರಗೆ ಸ್ಥಳಾಂತರಿಸಬೇಕೆಂದು ಒತ್ತಾಯಿಸಿದರು. ಅಂದಿನಿಂದ, ಕಣಿವೆಯಲ್ಲಿ ಭಯೋತ್ಪಾದಕರ ಹಿಂಸಾಚಾರವು ಉಲ್ಬಣಗೊಂಡಿದೆ.







