ಪಾಟ್ನಾದಲ್ಲಿ 2,000 ವರ್ಷ ಹಳೆಯ ಗೋಡೆಗಳನ್ನು ಪತ್ತೆ ಹಚ್ಚಿದ ಪುರಾತತ್ತ್ವ ಇಲಾಖೆ

Photo Credit: Twitter/@ASIGo
ಪಾಟ್ನಾ,ಜೂ.4: ಭಾರತೀಯ ಪುರಾತತ್ವ ಸವೇಕ್ಷಣಾ ಇಲಾಖೆ (ಎಎಸ್ಐ)ಯು ಪಾಟ್ನಾದ ಕುಮ್ರಾಹರ್ ಪ್ರದೇಶದಲ್ಲಿಯ ಕೊಳದ ಪುನರುಜ್ಜೀವನ ಕಾಮಗಾರಿ ನಿವೇಶನದಲ್ಲಿ ಇಟ್ಟಿಗೆ ಗೋಡೆಗಳ ಅವಶೇಷಗಳನ್ನು ಪತ್ತೆ ಹಚ್ಚಿದ್ದು,ಇವು ಕನಿಷ್ಠ 2,000 ವರ್ಷಗಳಷ್ಟು ಹಳೆಯದಾಗಿವೆ ಎಂದು ಅಧಿಕಾರಿಗಳು ನಂಬಿದ್ದಾರೆ.
ಪಾಟ್ನಾ ರೈಲು ನಿಲ್ದಾಣದಿಂದ ಪೂರ್ವಕ್ಕೆ ಆರು ಕಿ.ಮೀ.ದೂರದ,ಈ ಹಿಂದೆ ಮಾರ್ಯ ಸಾಮ್ರಾಜ್ಯದ ಅವಶೇಷಗಳು ಪತ್ತೆಯಾಗಿದ್ದ ಕುಮ್ರಾಹರ್ನಲ್ಲಿ ಗುರುವಾರ ಅಗೆಯುವ ಕಾಮಗಾರಿ ಸಂದರ್ಭ ಗೋಡೆಗಳ ಅವಶೇಷಗಳು ಕಂಡುಬಂದಿವೆ ಎಂದು ಎಎಸ್ಐ-ಪಾಟ್ನಾ ವಲಯದ ಅಧೀಕ್ಷಕ ಪುರಾತತ್ವಶಾಸ್ತ್ರಜ್ಞೆ ಗೌತಮಿ ಭಟ್ಟಾಚಾರ್ಯ ಅವರು ತಿಳಿಸಿದರು.
ಕೇಂದ್ರದ ‘ಮಿಷನ್ ಅಮೃತ ಸರೋವರ’ ಉಪಕ್ರಮದ ಅಂಗವಾಗಿ ಸಂರಕ್ಷಿತ ಕೊಳದ ಪುನರುಜ್ಜೀವನ ಕಾಮಗಾರಿಯನ್ನು ಎಎಸ್ಐ ನಡೆಸುತ್ತಿದೆ. ಕೊಳದ ಒಳಗೆ ಇಟ್ಟಿಗೆ ಗೋಡೆಗಳು ಪತ್ತೆಯಾಗಿದ್ದು ಮಹತ್ವದ್ದಾಗಿದೆ. ಎಎಸ್ಐನ ಪರಿಣಿತರ ತಂಡವೊಂದು ಈ ಗೋಡೆಗಳ ಪುರಾತತ್ವಶಾಸ್ತ್ರೀಯ ಪ್ರಾಮುಖ್ಯವನ್ನು ವಿಶ್ಲೇಷಿಸುತ್ತಿದೆ ಎಂದು ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಭಟ್ಟಾಚಾರ್ಯ ಹೇಳಿದರು.
ಈ ಇಟ್ಟಿಗೆಗಳು ಸುಮಾರು ಕ್ರಿ.ಶ.30ರಿಂದ ಸುಮಾರು ಕ್ರಿ.ಶ.375ರವರೆಗೆ ಉತ್ತರ ಭಾರತದ ಬಹುಪಾಲು,ಈಗಿನ ಅಫ್ಘಾನಿಸ್ತಾನ್ ಮತ್ತು ಮಧ್ಯ ಏಶ್ಯಾದ ಭಾಗಗಳನ್ನು ಆಳಿದ್ದ ಕುಶಾನರ ಕಾಲಕ್ಕೆ ಸೇರಿದವು ಎಂಬಂತೆ ಕಂಡು ಬರುತ್ತಿದೆ. ಆದರೆ ವಿವರವಾದ ವಿಶ್ಲೇಷಣೆಯ ಬಳಿಕವಷ್ಟೇ ಯಾವುದೇ ನಿರ್ಧಾರಕ್ಕೆ ಬರಲು ಸಾಧ್ಯ ಎಂದರು.