ಮುಸ್ಲಿಮ್ ವಿದ್ಯಾರ್ಥಿನಿಯರ ಸಂಖ್ಯೆಯಲ್ಲಿ ಹೆಚ್ಚಳ: ಶಾಸಕ ರಘುಪತಿ ಭಟ್
"ಉಡುಪಿ ಸರಕಾರಿ ಬಾಲಕಿಯರ ಕಾಲೇಜಿಗೆ ಹೆಚ್ಚಿದ ಬೇಡಿಕೆ"

ಉಡುಪಿ : ಹಿಜಾಬ್ ವಿಚಾರಕ್ಕೆ ರಾಷ್ಟ್ರಾದ್ಯಂತ ಚರ್ಚೆಗೆ ಒಳಗಾಗಿದ್ದ ಉಡುಪಿ ಸರಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ದಾಖಲಾತಿಯು ಈ ವರ್ಷ ಹೆಚ್ಚಾಗಿದೆ. ಎಲ್ಲಾ ಧರ್ಮದ ವಿದ್ಯಾರ್ಥಿನಿಯರು ಕಾಲೇಜಿಗೆ ಸೇರಿದ್ದಾರೆ. ಕಳೆದ ಬಾರಿಗಿಂತ ಈ ಬಾರಿ ನಮ್ಮ ಕಾಲೇಜಿನ ಬೇಡಿಕೆ ಹೆಚ್ಚಾಗಿದೆ. ಮುಸ್ಲಿಮ್ ವಿದ್ಯಾರ್ಥಿನಿಯರ ಸಂಖ್ಯೆ ಕೂಡ ಈ ಬಾರಿ ಹೆಚ್ಚಾಗಿದೆ ಎಂದು ಕಾಲೇಜಿನ ಅಭಿವೃದ್ಧಿ ಸಮಿತಿ ಅಧ್ಯಕ್ಷ ಹಾಗೂ ಶಾಸಕ ಕೆ.ರಘುಪತಿ ಭಟ್ ತಿಳಿಸಿದ್ದಾರೆ.
ಉಡುಪಿಯಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾಲೇಜಿನಲ್ಲಿ ಈ ವರ್ಷ ಕಂಪ್ಯೂಟರ್ ಸೈನ್ಸ್ ಹೊಸ ವಿಭಾಗ ಆರಂಭಿಸಲಾಗಿದೆ. ಕಾಮರ್ಸ್‌ನಲ್ಲೂ ಕಂಪ್ಯೂಟರ್ ಸೈನ್ಸ್ ವಿಭಾಗ ತೆರೆಯಲಾಗಿದೆ. ಟಿವಿ ಚರ್ಚೆ ಯಲ್ಲಿ ಕುಳಿತವರು ಉಡುಪಿಯ ಸೌಹಾರ್ದತೆ ಬಗ್ಗೆ ಏನೇನೋ ಮಾತನಾಡಿರಬಹುದು. ಆದರೆ ಉಡುಪಿಯಲ್ಲಿ ಸದಾ ಸೌಹಾರ್ದತೆ ಇದೆ ಎಂಬುದು ಸಾಬೀತಾಗಿದೆ ಎಂದರು.
ಹಿಜಾಬ್ ವಿಚಾರದಲ್ಲಿ ಕಾಲೇಜು ಪ್ರಖ್ಯಾತಿ ಮತ್ತು ಕುಖ್ಯಾತಿಗೆ ಒಳಗಾಗಿತ್ತು. ಆದರೂ ಒತ್ತಡದ ಮಧ್ಯೆ ನಮ್ಮ ಮಕ್ಕಳು ಉತ್ತಮ ಶೈಕ್ಷಣಿಕ ಸಾಧನೆ ಮಾಡಿದ್ದಾರೆ. ಪರೀಕ್ಷೆ ಬರೆಯುವಾಗ ಕಾಲೇಜು ಆವರಣದಲ್ಲಿ ಗೊಂದಲಮಯ ವಾತಾವರಣ ಇತ್ತು. ಕಾಲೇಜಿನ ಪ್ರೌಢಶಾಲಾ ವಿಭಾಗದ ಎಸೆಸೆಲ್ಸಿ ವಿದ್ಯಾರ್ಥಿನಿ ೬೨೫ ಅಂಕ ಗಳಿಸಿದ್ದಾಳೆ. ೧೦ ವಿದ್ಯಾರ್ಥಿಗಳಿಗೆ ಆರುನೂರಕ್ಕೂ ಹೆಚ್ಚು ಅಂಕ ಸಿಕ್ಕಿದೆ. ಅನೇಕ ವಿದ್ಯಾರ್ಥಿಗಳು ವಿಶಿಷ್ಟ ದರ್ಜೆಯನ್ನು ಪಡೆದಿದ್ದಾರೆ ಎಂದು ಅವರು ಹೇಳಿದರು.
ಉಪ್ಪಿನಂಗಡಿಯಲ್ಲಿ ಹಿಜಾಬ್ ವಿವಾದ ಕುರಿತು ಪ್ರತಿಕ್ರಿಯಿಸಿದ ಅವರು, ಹಿಜಾಬ್ ಒಂದು ಅಂತಾರಾಷ್ಟ್ರೀಯ ಷಡ್ಯಂತ್ರವಾಗಿದೆ. ಪೊಲೀಸರು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಬೇಕು. ಹಿಜಾಬ್ ಧರಿಸಿ ಬರುವ ಮಕ್ಕಳ ಪೋಷಕರ ಮೇಲೆ ಕ್ರಿಮಿನಲ್ ಕೇಸು ಹಾಕಬೇಕು. ಇಂದು ಮತಾಂಧರು ಮಾಧ್ಯಮಗಳ ಮೇಲೆ ಹಲ್ಲೆ ಮಾಡುವವರೆಗೆ ಬೆಳೆದಿದ್ದಾರೆ. ಇದಕ್ಕೆ ಸರಿಯಾದ ಉತ್ತರ ಸಮಾಜ ಕೊಡ ಬೇಕಾಗುತ್ತದೆ. ಕಾನೂನು ಕೈಗೆತ್ತಿಕೊಂಡು ಕೋರ್ಟ್ ಆದೇಶ ಧಿಕ್ಕರಿಸುವುದು ಮೂರ್ಖತನ ಎಂದು ಟೀಕಿಸಿದರು.
ಆರೆಸೆಸ್ಸ್ ಚಡ್ಡಿ ಸುಡಿ ಅಭಿಯಾನಕ್ಕೆ ಕರೆ ಕೊಟ್ಟಿರುವ ಸಿದ್ದರಾಮಯ್ಯಗೆ ಆರೆಸ್ಸೆಸ್ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಆರೆಸೆಸ್ಸ್ ಚಡ್ಡಿ ಸಂಸ್ಕೃತಿ ಬಿಟ್ಟು ಪ್ಯಾಂಟಿಗೆ ಬಂದು ಬಹಳ ಸಮಯವಾಯಿತು. ಈಗ ನಮ್ಮ ಗಣವೇಶ ಅಂಗಿ ಪ್ಯಾಂಟ್ ಆಗಿದೆ. ಸಿದ್ದರಾಮಯ್ಯ ರಾಜಕೀಯ ಕಾರಣಕ್ಕೆ ಹೀಗೆ ಮಾತನಾಡುತ್ತಾರೆ. ಆ ಚಡ್ಡಿ ಇದ್ದದ್ದರಿಂದ ದೇಶದಲ್ಲಿ ಒಳ್ಳೆಯ ವಾತಾವರಣ ಇದೆ. ಆರೆಸೆಸ್ಸ್ ಇಲ್ಲದೇ ಇರುತ್ತಿದ್ದರೆ ದೇಶದ ಪರಿಸ್ಥಿತಿ ಊಹಿಸಲೂ ಸಾಧ್ಯವಾಗುತ್ತಿರಲಿಲ್ಲ ಎಂದು ಹೇಳಿದರು.
ಎಲ್ಲಾ ಮಸೀದಿಗಳಲ್ಲಿ ಶಿವಲಿಂಗ ಹುಡುಕಬೇಡಿ ಎಂಬ ಮೋಹನ್ ಭಾಗವತ್ ಹೇಳಿಕೆಗೆ ಪ್ರತಿಕ್ರಿಯಿಸಿರುವ ಶಾಸಕರು, ಭಾಗವತ್ ಹೇಳಿರುವುದನ್ನು ಖಂಡಿತವಾಗಿ ಎಲ್ಲರೂ ಕೇಳುತ್ತಾರೆ. ಎಲ್ಲ ಮಸೀದಿಗಳನ್ನು ಹುಡುಕಲು ಹೋಗಬೇಡಿ ಎಂದು ಮೋಹನ್ ಭಾಗವತ್ ಹೇಳಿದ್ದಾರೆ. ಈಗ ಇರುವುದನ್ನು ಸರಿ ಮಾಡಿಕೊಳ್ಳೋಣ ಎಂಬುದು ಅದರ ಅರ್ಥ. ಕೆಲವು ಕುರುಹುಗಳು ಸಿಕ್ಕಿದಾಗ ಭಾವನೆಗೆ ಧಕ್ಕೆ ಆಗುತ್ತದೆ. ನಮ್ಮ ಮೂಲಸ್ಥಾನಕ್ಕಾಗಿ ಹುಡುಕಿಕೊಂಡು ಹೋಗಿ ಜೀರ್ಣೋದ್ಧಾರ ಮಾಡುತ್ತೇವೆ. ಜನರು ಭಾವನಾತ್ಮಕವಾಗಿ ಹೋರಾಟ ಮಾಡುತ್ತಿದ್ದಾರೆ. ಸಾಕ್ಷಿಗಳು ಸಿಕ್ಕಲ್ಲಿ ಹೋರಾಟ ಆಗಿಯೇ ಆಗುತ್ತದೆ ಎಂದು ರಘುಪತಿ ಭಟ್ ತಿಳಿಸಿದರು.