2020-21ರಲ್ಲಿ ಶೇ.80ರಷ್ಟು ಕುಸಿದ ಬಿಜೆಪಿ ಆದಾಯ
ಹೊಸದಿಲ್ಲಿ, ಜೂ.4: ಲೋಕಸಭಾ ಚುನಾವಣೆಗಳು ನಡೆದಿದ್ದ 2019-20ನೇ ಸಾಲಿಗೆ ಹೋಲಿಸಿದರೆ 2020-21ನೇ ವಿತ್ತವರ್ಷದಲ್ಲಿ ಬಿಜೆಪಿಯ ಆದಾಯವು ಸುಮಾರು ಶೇ.80ರಷ್ಟು ಕುಸಿದಿದೆ ಎಂದು ಚುನಾವಣಾ ಆಯೋಗಕ್ಕೆ ಸಲ್ಲಿಸಲಾಗಿರುವ ಪಕ್ಷದ ವಾರ್ಷಿಕ ಆಡಿಟ್ ವರದಿಯು ತೋರಿಸಿದೆ ಎಂದು thehindu.com ವರದಿ ಮಾಡಿದೆ.
ಮೇ 21ರಂದು ಸಲ್ಲಿಕೆಯಾಗಿದ್ದ ಬಿಜೆಪಿಯ ಆಡಿಟ್ ವರದಿಯನ್ನು ಚುನಾವಣಾ ಆಯೋಗವು ಶುಕ್ರವಾರ ಪ್ರಕಟಿಸಿದೆ. ಬಿಜೆಪಿಯು 2019-20ರಲ್ಲಿ 3,263.28 ಕೋ.ರೂ.ಗಳನ್ನು ಗಳಿಸಿದ್ದರೆ 2020-21ರಲ್ಲಿ ಅದು 752.33 ಕೋ.ರೂ.ಗೆ ಇಳಿದಿದೆ. ಆದಾಯದ ಪೈಕಿ 577.97 ಕೋ.ರೂ.ಗಳು ಸ್ವಯಂಪ್ರೇರಿತ ದೇಣಿಗೆಗಳ ಮೂಲಕ ಬಂದಿದ್ದರೆ, 22.38 ಕೋ.ರೂ.ಗಳು ಚುನಾವಣಾ ಬಾಂಡ್‌ಗಳ ಮೂಲಕ ಪಾವತಿಯಾಗಿವೆ. 2019-20ರಲ್ಲಿ ಬಿಜೆಪಿಯು ಚುನಾವಣಾ ಬಾಂಡ್‌ಗಳ ಮೂಲಕ 2,555 ಕೋ.ರೂ.ಗಳನ್ನು ಸಂಗ್ರಹಿಸಿತ್ತು ಮತ್ತು ಇದು ಆದಾಯದ ಅತಿದೊಡ್ಡ ಮೂಲವಾಗಿತ್ತು.
ಖರ್ಚುಗಳಲ್ಲಿಯೂ ಇಳಿಕೆಯಾಗಿದೆ. 2019-20ರಲ್ಲಿ 1,651.02 ಕೋ.ರೂ.ಗಳನ್ನು ಬಿಜೆಪಿಯು ವೆಚ್ಚ ಮಾಡಿದ್ದು,2020-21ರಲ್ಲಿ ಒಟ್ಟು ಖರ್ಚು 620.39 ಕೋ.ರೂ.ಗೆ ಇಳಿದಿದೆ. ಹೆಚ್ಚಿನ ಹಣ (421.01 ಕೋ.ರೂ.) ಚುನಾವಣೆಗಳಿಗಾಗಿ ವೆಚ್ಚವಾಗಿದೆ. 2020ರಲ್ಲಿ ಕೋವಿಡ್ ಸಾಂಕ್ರಾಮಿಕ ಆರಂಭಗೊಂಡ ಬಳಿಕ ಚುನಾವಣಾ ಪ್ರಚಾರವನ್ನು ಮೊಟಕುಗೊಳಿಸಲಾಗಿತ್ತು.
ಬಿಜೆಪಿ ಅತ್ಯಂತ ಹೆಚ್ಚಿನ ಆದಾಯವಿರುವ ಪಕ್ಷವಾಗಿ ಮುಂದುವರಿದಿದೆ. ಚುನಾವಣಾ ಅಯೋಗವು ಎಪ್ರಿಲ್‌ನಲ್ಲಿ ಪ್ರಕಟಿಸಿದ್ದ ವರದಿಯಂತೆ 2020-21ರಲ್ಲಿ ಕಾಂಗ್ರೆಸ್ ಪಕ್ಷವು 285.76 ಕೋ.ರೂ.ಗಳ ಆದಾಯವನ್ನು ಘೋಷಿಸಿದೆ.