ಸ್ಪರ್ಧಾತ್ಮಕ ಪರೀಕ್ಷೆಗಳ ಮಾಹಿತಿ ಕಾರ್ಯಾಗಾರ; ಸಾವಿರಾರು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು, ಪೋಷಕರು ಭಾಗಿ

ಮಂಗಳೂರು : ಯುಪಿಎಸ್‌ಸಿ, ಕೆಪಿಎಸ್‌ಸಿ ಸೇರಿದಂತೆ ಸರಕಾರಿ ಸೇವೆಗಾಗಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಯುವಕರಲ್ಲಿ, ಪೋಷಕರಲ್ಲಿ ಆಸಕ್ತಿ ಕಡಿಮೆ ಎಂಬ ವಾದವನ್ನು ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಸೇರಿದ್ದ ಯುವ ಸಮೂಹ ಮತ್ತೊಮ್ಮೆ ತಳ್ಳಿ ಹಾಕಿದೆ.
ಮಂಗಳೂರು ನಗರ ಪೊಲೀಸ್ ವತಿಯಿಂದ ಆಯೋಜಿಸಲಾದ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ಕುರಿತು ಮಾಹಿತಿ ಕಾರ್ಯಾಗಾರಕ್ಕೆ ಇಂದು ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಹಾಗೂ ಪೋಷಕರು ಸೇರಿ ೭೦೦ಕ್ಕೂ ಅಧಿಕ ಮಂದಿ ಭಾಗವಹಿಸಿದ್ದರು. ಮಾತ್ರವಲ್ಲದೆ, ಪೊಲೀಸ್ ಆಯುಕ್ತ ಎನ್. ಶಶಿಕುಮಾರ್, ದ.ಕ. ಜಿಲ್ಲಾ ಪೊಲೀಸ್ ಅಧೀಕ್ಷಕ ಋಷಿಕೇಶ್ ಸೊನಾವಣೆ ಸೇರಿದಂತೆ ಹಿರಿಯ ಅಧಿಕಾರಿಗಳ ಸ್ಪರ್ಧಾತ್ಮಕ ಪರೀಕ್ಷೆಗಾಗಿನ ಸ್ವಂತ ಅನುಭವ, ಪ್ರೇರಣಾತ್ಮಕ ಮಾತುಗಳಿಗೆ ಕಿವಿಯಾದರು.
ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ನೇತೃತ್ವದಲ್ಲಿ ನಗರ ಪೊಲೀಸ್ ವತಿಯಿಂದ ಕಳೆದ ವರ್ಷ ಆಯೋಜಿಸಲಾಗಿದ್ದ ಪೊಲೀಸ್ ಆಕಾಂಕ್ಷಿಗಳ ತರಬೇತಿ ಕಾರ್ಯಾಗಾರದಲ್ಲಿ ೭೩೪ ಅಭ್ಯರ್ಥಿಗಳು ನೋಂದಣಿಯಾಗಿದ್ದು, ಅವರಲ್ಲಿ ೨೦೬ ಮಂದಿಯನ್ನು ಆಯ್ಕೆ ಮಾಡಿ ಒಂದು ತಿಂಗಳ ಕಾಲ ತರಬೇತಿಯನ್ನು ನೀಡಲಾಗಿತ್ತು. ಅವರಲ್ಲಿ ೧೧ ಮಂದಿ ಇದೀಗ ಪೊಲೀಸರಾಗಿ ಆಯ್ಕೆಯಾಗಿದ್ದಾರೆ. ಪೊಲೀಸ್ ಇಲಾಖೆ ಸೇರಿದಂತೆ ಸರಕಾರಿ ಸೇವೆಗಳಿಗೆ ಜಿಲ್ಲೆಯ ಯುವಕರಲ್ಲಿ ಆಸಕ್ತಿಯಿದ್ದರೂ ಮಾರ್ಗದರ್ಶನದ ಅಗತ್ಯವನ್ನು ಮನಗಂಡು ಎನ್. ಶಶಿಕುಮಾರ್ ಈ ಬಾರಿ ಮತ್ತೆ ಸ್ಪರ್ಧಾತ್ಮಕ ಪರೀಕ್ಷೆಗಳ ಆಕಾಂಕ್ಷಿಗಳಿಗಾಗಿ ವಿವಿಧ ರೀತಿಯ ಪರೀಕ್ಷೆಗಳಿಂದ ಹುದ್ದೆಗಳನ್ನು ಪಡೆದಿರುವ ಅಧಿಕಾರಿಗಳ ಮೂಲಕ ಮಾಹಿತಿಯನ್ನು ಒದಗಿಸಿದರು.
ನಗರದ ವಿವಿಧ ಕಾಲೇಜುಗಳ ಪಿಯು ಹಾಗೂ ಪದವಿ ವಿದ್ಯಾರ್ಥಿಗಳು ಹಾಗೂ ಪೋಷಕರು ಭಾಗವಹಿಸಿ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಿಂದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುವ ಜತೆಗೆ ಅವರ ಅನುಭವಗಳನ್ನು ಪಡೆದುಕೊಂಡರು.
ಕಾರ್ಯಾಗಾರದ ಆರಂಭದಲ್ಲಿ ತಮ್ಮ ಅನುಭವಗಳೊಂದಿಗೆ ಪ್ರೇರಣಾತ್ಮಕ ನುಡಿಗಳನ್ನಾಡಿದ ದ.ಕ. ಜಿಲ್ಲಾ ಎಸ್ಪಿ ಋಷಿಕೇಶ್ ಸೊನಾವಣೆ, ತಾನು ಸಾಫ್ಟ್ ವೇರ್ ಇಂಜಿನಿಯರ್ ಕಲಿತು, ಕೆಲ ವರ್ಷ ಬಹುರಾಷ್ಟ್ರೀಯ ಕಂಪನಿಯಲ್ಲಿ ಇಂಜಿನಿಯರ್ ಆಗಿ ಕೆಲಸ ನಿರ್ವಹಿಸಿ ಬಳಿಕ ಯುಪಿಎಸ್‌ಸಿ ಪರೀಕ್ಷೆಗೆ ತಯಾರಿ ನಡೆಸಿ, ಆಯ್ಕೆಯಾದ ಬಗ್ಗೆ ತಿಳಿಸಿದರು.
ನಿರ್ದಿಷ್ಟವಾದ ಗುರಿಯೊಂದಿಗೆ ನಾನು ಸಾಧಿಸಿಯೇ ತೀರುವೆನೆಂಬ ಹಠದಿಂದ ಪ್ರಯತ್ನ ಮುಂದುವರಿಸಿದರೆ ಯಾವುದೇ ರೀತಿಯಲ್ಲಿ ಜೀವನದಲ್ಲಿ ಯಶಸ್ಸು ಗಳಿಸಲು ಸಾಧ್ಯ ಎಂದವರು ಹೇಳಿದರು.
ಪುತ್ತೂರು ಡಿವೈಎಸ್ಪಿ ಗಾನ ಪಿ. ಕುಮಾರ್ ಮಾತನಾಡಿ, ತಂದೆಯ ಹಾದಿಯಲ್ಲೇ ತಾನೂ ಬೆಳೆದು ಪರಿಸರ ಸಂರಕ್ಷಣೆಯ ನಿಟ್ಟಿನಲ್ಲಿ ಅರಣ್ಯ ಅಧಿಕಾರಿಯಾಗಬೇಕೆಂಬ ಹಂಬಲ ಹೊಂದಿದ್ದರೂ ಎಂಬಿಬಿಎಸ್ ಪದವಿ ಪಡೆದು ಎಂಡಿ ಶಿಕ್ಷಣದ ವೇಳೆ ಜತೆಯಾಗಿ ಕೆಪಿಎಸ್‌ಸಿ ಪರೀಕ್ಷೆಗೆ ಸತತ ಪ್ರಯತ್ನ ಮಾಡಿ ಡಿವೈಎಸ್ಪಿ ಹುದ್ದೆಗೇರಿದ ಬಗ್ಗೆ ವಿವರ ನೀಡಿದರು. ಜತೆಗೆ ಯಾವುದೇ ಉನ್ನತ ಹುದ್ದೆ, ಜೀವನದಲ್ಲಿ ಯಶಸ್ಸಿಗಾಗಿ ಸಹನೆ, ದೃಢ ನಿರ್ಧಾರ ಅತೀ ಅಗತ್ಯ ಎಂಬುದಾಗಿ ಅವರು ಆಕಾಂಕ್ಷಿಗಳಿಗೆ ಕಿವಿಮಾತು ಹೇಳಿದರು.
ಎಎಸ್ಪಿ ಶಿವಾಂಶು ರಜಪೂತ್ ಮಾತನಾಡಿ, ತಮ್ಮ ಭವಿಷ್ಯದ ಆಯ್ಕೆಯ ಕುರಿತಂತೆ ನಮ್ಮಲ್ಲಿ ನಿರ್ದಿಷ್ಟವಾದ ಗುರಿ ಅಗತ್ಯ ಎಂದರು. ಕಂಪ್ಯೂಟರ್ ಸಾಯನ್ಸ್‌ನಲ್ಲಿ ಇಂಜಿನಿಯರಿಂಗ್ ಪದವಿ ಪಡೆದು ಇಂಜಿನಿಯರ್ ಆಗಿ ಸ್ವಲ್ಪ ಸಮಯ ವೃತ್ತಿಯನ್ನೂ ನಿರ್ವಹಿಸಿ ಬಳಿಕ ಸತತ ಐದು ಪ್ರಯತ್ನಗಳಲ್ಲಿ ಯುಪಿಎಸ್‌ಸಿ ಪರೀಕ್ಷೆಯನ್ನು ಪೂರೈಸಿದ ಬಗ್ಗೆ ವಿವರ ನೀಡಿದರು.
ಬಳಿಕ ಇತ್ತೀಚೆಗೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ತೇರ್ಗಡೆಯಾಗಿ ವಿವಿಧ ಪೊಲೀಸ್ ಹುದ್ದೆಗಳಲ್ಲಿರುವ ಮಾರುತಿ, ಸಿದ್ಧಪ್ಪ, ಫೈಝುನ್ನಿಸಾ, ಪ್ರತಿಭಾ, ಅರುಣ್, ಮನೋಹರ್ ಆಕಾಂಕ್ಷಿಗಳಿಗೆ ಪರೀಕ್ಷೆಗೆ ತಯಾರಿ ನಡೆಸುವ ಕುರಿತಂತೆ ಮಾಹಿತಿ, ಮಾರ್ಗದರ್ಶನ ನೀಡಿದರು.
ಡಿಸಿಪಿ ಹರಿರಾಂ ಶಂಕರ್ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಎಸಿಪಿ ಗೀತಾ ವೇರ್ಣೇಕರ್, ಪಿಎ ಹೆಗಡೆ ಉಪಸ್ಥಿತರಿದ್ದರು.
ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ನಿರಂತರ ತಯಾರಿ, ನಿರ್ದಿಷ್ಟ ಗುರಿ ಮುಖ್ಯ
ಸ್ಪರ್ಧಾತ್ಮಕ ಪರೀಕ್ಷೆ ಎಂಬುದು ಯಾವುದೇ ರೀತಿಯ ವಿದ್ಯಾರ್ಹತೆ ಅಲ್ಲ. ಅದು ಸರಕಾರಿ ಸೇವೆಯಲ್ಲಿನ ಉನ್ನತ ಹುದ್ದೆಗಾಗಿ ನಡೆಯುವ ಪರೀಕ್ಷೆ. ಇದಕ್ಕಾಗಿ ಆಕಾಂಕ್ಷಿಗಳಲ್ಲಿ ನಿರ್ದಿಷ್ಟವಾದ ಗುರಿ ಹಾಗೂ ಸತತ ಪ್ರಯತ್ನ ಅತೀ ಮುಖ್ಯ. ಶಿಕ್ಷಣ ಕಾಶಿಯೆಂದೇ ಹೆಸರಾಗಿರುವ ದ.ಕ., ಉಡುಪಿ ಜಿಲ್ಲೆಯಲ್ಲಿ ಸ್ಪಧಾತ್ಮಕ ಪರೀಕ್ಷೆಗಳ ಬಗ್ಗೆ ಆಸಕ್ತಿಯಿದ್ದರೂ ಮಾರ್ಗದರ್ಶನದ ಕೊರತೆ ಇದೆ. ಅದು ದೊರಕಿದರೆ ಸಾಕಷ್ಟು ಸಂಖ್ಯೆಯಲ್ಲಿ ಜಿಲ್ಲೆಯ ಯುವಕರು ಸರಕಾರಿ ಸೇವೆಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ನಿರಂತರ ಓದುವಿಕೆ, ಸ್ನೇಹಿತರು, ಕುಟುಂಬ, ಬಂಧುಗಳ ಪ್ರೋತ್ಸಾಹ, ಏಕಾಗ್ರ ಚಿತ್ತ, ಅರ್ಥೈಸಿಕೊಂಡು ಓದಿ, ಅರಗಿಸಿಕೊಳ್ಳುವುದು ಇವೇ ಮೊದಲಾದ ಕ್ರಮಗಳನ್ನು ತೆಗೆದುಕೊಂಡರೆ ಸ್ಪರ್ಧಾತ್ಮಕ ಪರೀಕ್ಷೆ ಪಾಸ್ ಮಾಡುವುದು ಕಷ್ಟವಲ್ಲ. ಗುರಿ ಮತ್ತು ತರಬೇತಿ ನಿಯಮಿತವಾಗಿ ಇರಬೇಕು. ಅಪಾರ ಶ್ರಮ ವಹಿಸಿದರೆ ಫೇಲ್ ಆಗಲು ಸಾಧ್ಯವೇ ಇಲ್ಲ. ನಿಮ್ಮ ಭವಿಷ್ಯಕ್ಕೆ ನೀವೇ ಉತ್ತರ ನೀಡಬೇಕು. ಅನಗತ್ಯ ವಿಚಾರಗಳನ್ನು ತಲೆಗೆ ಹಾಕಿಕೊಳ್ಳಬಾರದು.
-ಎನ್. ಶಶಿಕುಮಾರ್, ಪೊಲೀಸ್ ಆಯುಕ್ತರು, ಮಂಗಳೂರು.