ಅಂತಾರಾಷ್ಟ್ರೀಯ ನೃತ್ಯಂಜಲಿ ಫೆಸ್ಟಿವಲ್‌ನಲ್ಲಿ ನೃತ್ಯ ಪ್ರದರ್ಶನ

ಉಡುಪಿ : ಮಲೇಷ್ಯಾದ ಕೌಲಾಲಂಪುರದ ಟೆಂಪಲ್ ಆಫ್ ಫೈನ್ ಆರ್ಟ್ಸ್‌ನಲ್ಲಿ ಜೂ.೮ರಂದು ನಡೆಯುವ ಆರನೇ ಅಂತಾರಾಷ್ಟ್ರೀಯ ನೃತ್ಯಂಜಲಿ ಫೆಸ್ಟಿವಲ್‌ನಲ್ಲಿ ಉಡುಪಿಯ ಭರತನಾಟ್ಯ ಸಂಸ್ಥೆ ಸೃಷ್ಟಿ ನೃತ್ಯ ಕುಟೀರದ ವಿದ್ಯಾರ್ಥಿ ಗಳ ತಂಡ ನೃತ್ಯ ಪ್ರದರ್ಶನವನ್ನು ನೀಡಲಿವೆ ಎಂದು ನೃತ್ಯ ಕುಟೀರದ ಗುರು ಮಂಜರಿ ಚಂದ್ರ ತಿಳಿಸಿದ್ದಾರೆ.
ಉಡುಪಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ವರ್ಷ ಚೆನ್ನೈ ಸಂಗಮ್ ಗ್ಲೋಬಲ್ ಅಕಾಡೆಮಿ ನಡೆಸಿದ ಭರತ ನಾಟ್ಯ ಸ್ಪರ್ಧೆ ಯಲ್ಲಿ ಸೃಷ್ಟಿ ನೃತ್ಯ ಕುಟೀರದ ವಿದ್ಯಾರ್ಥಿನಿಯರಾದ ಧನ್ಯಶ್ರೀ ಭಟ್ ಹಾಗೂ ಜಾನಕಿ ಡಿ.ವಿ. ಪ್ರಥಮ ಸ್ಥಾನ ಪಡೆದು ಚಿನ್ನದ ಪದಕ ಮತ್ತು ಪನ್ನಗಾ ರಾವ್ ಸಮಾಧಾನಕರ ಬಹುಮಾನ ಪಡೆದುಕೊಂಡಿದ್ದಾರೆ. ಅಲ್ಲದೆ ಇವರು ನನ್ನ ಜೊತೆ ನೃತ್ಯಂಜಲಿ ಫೆಸ್ಟಿವಲ್‌ನಲ್ಲಿ ಭಾಗವಹಿಸುವ ಅವಕಾಶ ಪಡೆದಿದ್ದಾರೆ ಎಂದರು.
ಅಂತಾರಾಷ್ಟ್ರೀಯ ಫೆಸ್ಟಿವಲ್‌ನಲ್ಲಿ ಕರ್ನಾಟಕವನ್ನು ಪ್ರತಿನಿಧಿಸುವ ತಂಡ ನಮ್ಮದಾಗಿದೆ. ದಿ.ಮಾಧವ್ ಭಟ್ ಹಾಗೂ ವಿದ್ಯಾ ದಂಪತಿ ಪುತ್ರಿ ಧನ್ಯಶ್ರೀ ಭಟ್ ಎಂಜಿಎಂ ಕಾಲೇಜಿನ ಬಿಸ್ಸಿ ವಿದ್ಯಾರ್ಥಿನಿಯಾಗಿದ್ದು, ಕರ್ನಾಟಕ ಶಿಕ್ಷಣ ಮಂಡಳಿ ನಡೆಸಿದ ಭರತನಾಟ್ಯ ಸೀನಿಯರ್ ಪರೀಕ್ಷೆಯಲ್ಲಿ ಶೇ.೯೫ ಅಂಕ ಪಡೆದುಕೊಂಡಿದ್ದಾರೆ. ವಿಪಿನ್ ಕುಮಾರ್ ಹಾಗೂ ಧನ್ಯ ದಂಪತಿ ಪುತ್ರಿ ಜಾನಕಿ ಬ್ರಹ್ಮಾವರದ ಲಿಟ್ಲ್‌ರಾಕ್ ಶಾಲೆಯ ೧೦ನೆ ತರಗತಿ ವಿದ್ಯಾರ್ಥಿಯಾಗಿದ್ದು, ಭರತ ನಾಟ್ಯ ಸೀನಿಯರ್ ಪರೀಕ್ಷೆಯಲ್ಲಿ ಶೇ.೯೦ ಅಂಕ ಪಡೆದಿದ್ದಾರೆ. ಗಣೇಶ್ ರಾವ್ ಹಾಗೂ ಸುಮನ ರಾವ್ ದಂಪತಿ ಪುತ್ರಿ ಪನ್ನಗಾ ರಾವ್, ಪಿಪಿಸಿ ಪ್ರಥಮ ವರ್ಷದ ಬಿಕಾಂ ವಿದ್ಯಾರ್ಥಿನಿಯಾಗಿದ್ದು, ಭರತನಾಟ್ಯ ವಿದ್ವತ್ ಪೂರ್ವ ಪರೀಕ್ಷೆ ಯಲ್ಲಿ ಶೇ.೮೪ರಷ್ಟು ಅಂಕ ಪಡೆದಿದ್ದಾರೆ ಎಂದು ಅವರು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಧನ್ಯಶ್ರೀ ಭಟ್, ಜಾನಕಿ ಡಿ.ವಿ., ಪನ್ನಗಾ ರಾವ್ ಹಾಜರಿದ್ದರು.