ಪುತ್ತೂರು : ಹಿಂಜಾವೇ ಕಾರ್ಯಕರ್ತ ಕಾರ್ತಿಕ್ ಮೇರ್ಲ ಕೊಲೆ ಆರೋಪಿ ಚರಣ್ ರಾಜ್ ಹತ್ಯೆ
ಬೈಕ್ ನಲ್ಲಿ ಬಂದ ದುಷ್ಕರ್ಮಿಗಳ ತಂಡದಿಂದ ಕೃತ್ಯ

ಪುತ್ತೂರು : ಹಿಂಜಾವೇ ಕಾರ್ಯಕರ್ತ ಕಾರ್ತಿಕ್ ಮೇರ್ಲ ಎಂಬವರ ಹತ್ಯೆ ಆರೋಪಿಯನ್ನು ಬೈಕ್ ನಲ್ಲಿ ಬಂದ ದುಷ್ಕರ್ಮಿಗಳ ತಂಡವೊಂದು ಮಚ್ಚಿನಿಂದ ಕೊಚ್ಚಿ ಹತ್ಯೆಗೈದ ಘಟನೆ ಸುಳ್ಯ ತಾಲೂಕಿನ ಬೆಳ್ಳಾರೆ ಸಮೀಪದ ಪೆರ್ಲಂಪಾಡಿ ಎಂಬಲ್ಲಿ ನಡೆದಿದೆ.
ಪುತ್ತೂರು ತಾಲೂಕಿನ ಅರ್ಯಾಪು ನಿವಾಸಿ ಚರಣ್ ರಾಜ್ ರೈ ( 28) ಮೃತ ಯುವಕ. ಈತ ಕಾರ್ತಿಕ್ ಮೇರ್ಲ ಹತ್ಯೆಯ ಮೂರು ಆರೋಪಿಗಳ ಪೈಕಿ ಓರ್ವ ಎಂದು ಪೊಲೀಸರು ತಿಳಿಸಿದ್ದಾರೆ.
ಚರಣ್ ರಾಜ್ ಪತ್ನಿ ಪೆರ್ಲಂಪಾಡಿಯವರಾಗಿದ್ದು, ಅಲ್ಲಿಯೇ ಚರಣ್ ಮೆಡಿಕಲ್ ಶಾಪ್ ತೆರೆಯಲು ಸಿದ್ಧತೆ ನಡೆಸಿದ್ದು, ಪೆರ್ಲಂಪಾಡಿಯ ಮೇಲಿನ ಪೇಟೆಯ ಕಾಂಪ್ಲೆಕ್ಸ್ ಒಂದರಲ್ಲಿ ಮೆಡಿಕಲ್ ಶಾಪ್ ಗೆ ಅಂಗಡಿ ಸಜ್ಜುಗೊಳಿಸಿದ್ದು, ನಾಳೆ ಅದರ ಶುಭಾರಂಭ ನಡೆಯಲಿತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಅಂಗಡಿಗೆ ಬೇಕಾದ ವಸ್ತುಗಳನ್ನು ಜೋಡಿಸುವ ಕಾರ್ಯದಲ್ಲಿ ಚರಣ್ ತೊಡಗಿಸಿಕೊಂಡಿದ್ದರು. ಇಂದು ಸಂಜೆಯ ವೇಳೆ ಎರಡು ಬೈಕಿನಲ್ಲಿ ಬಂದ ಮೂವರು ದುಷ್ಕರ್ಮಿಗಳು ಮಾರಕಾಯುಧದಿಂದ ಚರಣ್ ಗೆ ಕಡಿದಿದ್ದಾರೆ. ಗಂಭೀರ ಗಾಯಗೊಂಡ ಅವರು ಬಳಿಕ ಕೊನೆಯುಸಿರೆಳೆದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
2019ರ ಸೆ.4 ರಂದು ಗಣೇಶೋತ್ಸವದ ಪೆಂಡಾಲ್ ನಲ್ಲಿ ಕಾರ್ತಿಕ್ ಮೇರ್ಲ ಹತ್ಯೆ ಮಾಡಲಾಗಿತ್ತು. ಈ ಕೊಲೆ ಪ್ರಕರಣದಲ್ಲಿ ಸಹೋದರರಾದ ಕಿರಣ್ ಮತ್ತು ಚರಣ್ ಹಾಗೂ ಮಂಗಳೂರು ನಿವಾಸಿ ಪ್ರಿತೇಶ್ ಎಂಬವರನ್ನು ಪೊಲೀಸರು ಬಂಧಿಸಿದ್ದರು. ಚರಣ್ ಹಾಗೂ ಕಿರಣ್ ಎರಡು ವರ್ಷಗಳ ಹಿಂದೆ ಜಾಮೀನಿನ ಮೇಲೆ ಬಿಡುಗಡೆ ಹೊಂದಿದ್ದರು. ಚರಣ್ ರಾಜ್ ಪತ್ನಿ ಮತ್ತು ಒಂದು ವರ್ಷದ ಮಗುವನ್ನು ಅಗಲಿದ್ದಾರೆ.
ಈ ಬಗ್ಗೆ ಇಲ್ಲಿನ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.