‘'ವಿಸರ್ಜನೆ ಮಾಡಬೇಕಾಗಿರುವುದು ಸಮಿತಿಯನ್ನಲ್ಲ, ಪರಿಷ್ಕೃತ ಪಠ್ಯವನ್ನು'': ಸರಕಾರದ ವಿರುದ್ಧ ವ್ಯಾಪಕ ಆಕ್ರೋಶ

ಬೆಂಗಳೂರು, ಜೂ. 4: ‘ಪಠ್ಯ ಪುಸ್ತಕ ಪರಿಷ್ಕರಣಾ ಸಮಿತಿಯನ್ನು ವಿಸರ್ಜನೆ' ಬೆನ್ನಲ್ಲೆ ಎಐಸಿಸಿ ಮುಖಂಡ ರಾಹುಲ್ ಗಾಂಧಿ, ವಿಪಕ್ಷ ನಾಯಕ ಸಿದ್ದರಾಮಯ್ಯ, ಹಿರಿಯ ಸಾಹಿತಿ ಬರಗೂರು ರಾಮಚಂದ್ರ, ಶಿಕ್ಷಣ ತಜ್ಞ ಡಾ.ನಿರಂಜನಾರಾಧ್ಯ, ಕೆಲ ಮಠಾಧೀಶರು ಸೇರಿದಂತೆ ಟ್ವಿಟರ್, ಫೇಸ್‍ಬುಕ್ ಸಹಿತ ಜಾಲತಾಣದಲ್ಲಿ ರಾಜ್ಯ ಸರಕಾರದ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
‘ಬಹುತ್ವಕ್ಕೆ ಮಾರಕವಾದ ಪಠ್ಯವನ್ನ ಮಕ್ಕಳ ಮೇಲೆ ಹೇರಲು ಕಾಂಗ್ರೆಸ್ ಬಿಡುವುದಿಲ್ಲ' ಎಂದು ರಾಹುಲ್ ಗಾಂಧಿ ಎಚ್ಚರಿಕೆ ನೀಡಿದ್ದರೆ, ವಿಪಕ್ಷ ನಾಯಕ ಸಿದ್ದರಾಮಯ್ಯ, ‘ವಿಸರ್ಜನೆ ಮಾಡಬೇಕಾಗಿರುವು ಪರಿಷ್ಕೃತ ಪಠ್ಯವನ್ನು, ಈಗಾಗಲೇ ಅವಧಿ ಮುಗಿದಿರುವ ಪಠ್ಯಪುಸ್ತಕ ಪರಿಶೀಲನಾ ಸಮಿತಿಯನ್ನಲ್ಲ. ಪೂರ್ವಗ್ರಹಪೀಡಿತ ಅಧ್ಯಕ್ಷನನ್ನು ಕಿತ್ತುಹಾಕಿದ ಮೇಲೆ ಆ ಸಮಿತಿ ಶಿಫಾರಸು ಮಾಡಿರುವ ಪಠ್ಯವನ್ನು ಹೇಗೆ ಒಪ್ಪಿಕೊಳ್ಳಲು ಸಾಧ್ಯ?' ಎಂದು ಪ್ರಶ್ನಿಸಿದ್ದಾರೆ.
ಈ ಮಧ್ಯೆ ಮಾತನಾಡಿರುವ ಶಿಕ್ಷಣ ತಜ್ಞ ಡಾ.ನಿರಂಜನಾರಾಧ್ಯ, ‘ತಮಗೆ ಬೇಕಾದುದೆಲ್ಲವನ್ನು ವ್ಯವಸ್ಥಿತವಾಗಿ ಮಾಡಿ, ಅದನ್ನು ಹಾಗೆಯೆ ಉಳಿಸಿಕೊಂಡು ಸಮಿತಿಯನ್ನು ವಿಸರ್ಜಿಸಿರುವುದು, ಕೇವಲ ಕಣ್ಣೊರೆಸುವ ತಂತ್ರ. ಪಠ್ಯ ಪರಿಷ್ಕರಣೆ ಟಿಪ್ಪಣಿಯಲ್ಲಿ ಎಲ್ಲಿಯೂ ಆಗಿರುವ ತಪ್ಪನ್ನು ಒಪ್ಪಿಕೊಳ್ಳುವುದಾಗಲಿ ಅಥವಾ ಸಂವಿಧಾನಕ್ಕೆ ವಿರುದ್ಧವಾಗಿ ವೈದೀಕರಣ ನೆಲೆಯಲ್ಲಿ ಸೇರಿಸಿರುವ ತಿರುಚಿರುವ ಪಾಠಗಳನ್ನು ಕೈಬಿಡುವ ಬಗ್ಗೆಯಾಗಲಿ ಪ್ರಸ್ತಾಪವಾಗಿಲ್ಲ' ಎಂದು ಸರಕಾರದ ನಡೆಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
‘ಮತ್ತೆ ಪರಿಷ್ಕರಣೆ ಮಾಡುವ ಕುರಿತು ಮುಕ್ತ ಮನಸ್ಸು ಎಂದು ಹೇಳುತ್ತಲೇ ಪಠ್ಯ ಹಿಂತೆಗೆದುಕೊಳ್ಳುವ ಮಾತಿಲ್ಲ. ನೀವು ಕೇಶವ ಕೃಪದ ಅಡಿಯಾಳು ಮಾತ್ರವಲ್ಲ, ವಿಕೃತ ಟ್ರೋಲರ್ ಒಬ್ಬನ ಬೆಂಬಲಿಗನಂತೆ ಹೇಳಿಕೆ ಬಿಡುಗಡೆ ಮಾಡಿದ್ದೀರಿ. ವಿಕೃತ ವ್ಯಕ್ತಿಯಿಂದ ಶಾಲಾ ಪಠ್ಯ ರೂಪಿಸಿದ್ದು ತಪ್ಪಾಗಿದೆ ಎಂಬುದನ್ನು ಈಗಲೂ ನೀವು ಗುರುತಿಸಿಕೊಳ್ಳಲು ಸಿದ್ಧರಿಲ್ಲ' ಎಂದು ನಾಗೇಗೌಡ ಕೀಲಾರ ಶಿವಲಿಂಗಯ್ಯ ಆಕ್ರೋಶ ಹೊರಹಾಕಿದ್ದಾರೆ.
ಚಕ್ರತೀರ್ಥನನ್ನು ಬಂಧಿಸಬೇಕು
‘ಪಠ್ಯಪುಸ್ತಕ ಪುನರ್ ಪರಿಶೀಲನಾ ಸಮಿತಿಯನ್ನು ವಿಸರ್ಜಿಸುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಹೇಳಿಕೆ ನೀಡಿರುವುದು ಸ್ವಾಗತಾರ್ಹ. ಕೂಡಲೇ ಪರಿಷ್ಕೃತ ಪಠ್ಯವನ್ನು ಸಂಪೂರ್ಣ ಹಿಂದಕ್ಕೆ ಪಡೆದು ಹಳೆಯ ಪಠ್ಯವನ್ನೇ ಮುಂದುವರೆಸಬೇಕು, ನಾಡಗೀತೆ, ಕುವೆಂಪು, ನಾಡಧ್ವಜಕ್ಕೆ ಅಪಮಾನ ಎಸಗಿದ ಚಕ್ರತೀರ್ಥನನ್ನು ಬಂಧಿಸಬೇಕು'
-ಟಿ.ಎ.ನಾರಾಯಣಗೌಡ ಕರವೇ ರಾಜ್ಯಾಧ್ಯಕ್ಷ
ಕರ್ನಾಟಕದ ಮಕ್ಕಳ ಭವಿಷ್ಯದ ನಿರ್ಧಾರವನ್ನ ಅರ್ಹತೆಯಿಲ್ಲದ ಕೈಗಳಿಗೆ ವಹಿಸಲಾಗಿದೆ.
— Rahul Gandhi (@RahulGandhi) June 4, 2022
ಸಾಮಾಜಿಕ ನ್ಯಾಯ, ಪ್ರಾದೇಶಿಕತೆ ಮತ್ತು ಲಿಂಗ ಸಮಾನತೆ ಸಾರುವ ಪಾಠಗಳನ್ನ, ಲೇಖಕರನ್ನ ಹೊರಗಿಟ್ಟು ಮಕ್ಕಳಿಗೆ ಕೇಸರೀಕರಣದ ಪಾಠ ಹೇಳಲು ಹೊರಟಿರುವುದು ವೈವಿಧ್ಯತೆಯ ತೊಟ್ಟಿಲಾದ ಭಾರತಕ್ಕೆ ಮಾಡುವ ಅಪಮಾನ.
ಕಳೆದ ಹತ್ತು ವರ್ಷಗಳಿಂದ ಕನ್ನಡ ನುಡಿ, ಸಾಹಿತ್ಯ ಮತ್ತು ಸಾಹಿತಿಗಳನ್ನು ಗೇಲಿ ಮಾಡುತ್ತಾ ಬಂದಿರುವ, ಸಾಮಾಜಿಕ ಜಾಲತಾಣಗಳಲ್ಲಿ ವಿಕೃತಿಯ ಅಭಿಪ್ರಾಯಗಳನ್ನು ಹಂಚಿಕೊಂಡು ಸಾಮಾಜಿಕ ಆರೋಗ್ಯವನ್ನು ಹಾಳುಗೆಡಹುತ್ತಾ ಬಂದಿರುವ ರೋಹಿತ್ ಚಕ್ರತೀರ್ಥ ಎಂಬ ಕಿಡಿಗೇಡಿಯ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು. 8/8#SaveKarnataka
— Siddaramaiah (@siddaramaiah) June 4, 2022







