ಮಂಗಳೂರು: ಸುಳ್ಳು ಪ್ರಕರಣ ದಾಖಲು ಆರೋಪಿಸಿ ಪತ್ರಕರ್ತರಿಂದ ಪ್ರತಿಭಟನೆ
ಮುಖ್ಯಮಂತ್ರಿ, ಗೃಹ ಸಚಿವರಿಗೆ ಮನವಿ

ಮಂಗಳೂರು : ಉಪ್ಪಿನಂಗಡಿ ಹಿಜಾಬ್ ಪ್ರಕರಣ ವರದಿ ಮಾಡಲು ತೆರಳಿದ್ದ ಪತ್ರಕರ್ತರ ಮೇಲೆ ಸುಳ್ಳು ಕೇಸ್ ದಾಖಲಿಸಲಾಗಿದೆ ಎಂದು ಆರೋಪಿಸಿ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರು ಶನಿವಾರ ನಗರದ ಕ್ಲಾಕ್ ಟವರ್ ಮುಂದೆ ಪ್ರತಿಭಟನೆ ನಡೆಸಿದರು.
ಎಸ್ಪಿ ಕಚೇರಿ ವರೆಗೆ ಮೆರವಣಿಗೆಯಲ್ಲಿ ಸಾಗಿದ ಪತ್ರಕರ್ತರು, ನ್ಯಾಯ ನೀಡುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿ ಕಾರಿ ಋಷಿಕೇಶ್ ಸೋನಾವಣೆ ಮೂಲಕ ಗೃಹಸಚಿವರಿಗೆ ಮನವಿ ಸಲ್ಲಿಸಿದರು.
ಪ್ರತಿಭಟನೆ ನಿರತರನ್ನು ಉದ್ದೇಶಿಸಿ ಮಾತನಾಡಿದ ನಿಕಟಪೂರ್ವ ಅಧ್ಯಕ್ಷ ಪಿ.ಬಿ.ಹರೀಶ್ ರೈ, ಉಪ್ಪಿನಂಗಡಿ ಠಾಣಾಧಿಕಾರಿ ಎಚ್ಚೆತ್ತುಕೊಂಡು, ಕರ್ತವ್ಯ ನಿರ್ವಹಿಸಿದ್ದರೆ ಪತ್ರಕರ್ತರ ಮೇಲೆ ಹಲ್ಲೆಯೇ ನಡೆಯುತ್ತಿರಲಿಲ್ಲ. ಪತ್ರಕರ್ತರು ನ್ಯಾಯಕ್ಕಾಗಿ ಮನವಿ ನೀಡಿದ ಬಳಿಕವೂ ಪತ್ರಕರ್ತರ ವಿರುದ್ಧ ಸುಳ್ಳು ಕೇಸು ದಾಖಲಿಸಿ, ಎಫ್‌ಐಆರ್ ಪ್ರತಿಯನ್ನು ಸಾಮಾಜಿಕ ಜಾಲತಾಣಗಳ ಮೂಲಕ ಹರಿಯ ಬಿಡಲಾಗಿದೆ. ಇದು ಖಂಡನೀಯ ಎಂದರು.
ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ಮಾತನಾಡಿ, ಸುಳ್ಳು ದೂರಿಗೆ ತಕ್ಷಣ ಬಿ ರಿಪೋರ್ಟ್ ಹಾಕಬೇಕು. ಘಟನಾ ಸ್ಥಳದಲ್ಲಿದ್ದು ನಿರ್ಲಕ್ಷ್ಯ ತೋರಿದ ಪೊಲೀಸರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ಪತ್ರಕರ್ತರಿಗೆ ಭದ್ರತೆ ಮತ್ತು ರಕ್ಷಣೆ ನೀಡಬೇಕು, ಇನ್ನು ಮುಂದೆ ರೀತಿಯ ಘಟನೆ ಮರುಕಳಿಸದಂತೆ ಎಚ್ಚರ ವಹಿಸಬೇಕು ಎಂದು ಸರಕಾರಕ್ಕೆ ಒತ್ತಾಯಿಸಿದರು.
ರಾಜ್ಯ ಸಮಿತಿ ಸದಸ್ಯ ಜಗನ್ನಾಥ ಶೆಟ್ಟಿ ಬಾಳ ಮಾತನಾಡಿ, ರಾಜ್ಯ ಸಂಘದ ಪದಾಧಿಕಾರಿಗಳ ಗಮನಕ್ಕೆ ತಂದಿದ್ದೇವೆ. ಅವರು ಗೃಹಸಚಿವರ ಜತೆ ಮಾತುಕತೆ ನಡೆಸಿದ್ದಾರೆ ಎಂದರು.
ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಕುಂದೇಶ್ವರ ಮನವಿ ಪತ್ರ ಓದಿದರು. ಕಾರ್ಯದರ್ಶಿ ವಿಜಯ ಕೋಟ್ಯಾನ್ ಪಡು ನಿರೂಪಿಸಿದರು. ಪುತ್ತೂರು ಸಂಘದ ಅಧ್ಯಕ್ಷ ಶ್ರವಣ್ ಕುಮಾರ್ ನಾಳ ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಪ್ರತ್ಯೇಕ ಮನವಿ ಸಲ್ಲಿಸಿದರು.
ಜಿಲ್ಲಾಧಿಕಾರಿ ಕೆ.ವಿ.ರಾಜೇಂದ್ರ ಅವರ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.
ಪ್ರೆಸ್ ಕ್ಲಬ್ ಅಧ್ಯಕ್ಷ ಅನ್ನು ಮಂಗಳೂರು, ಪ್ರಧಾನ ಕಾರ್ಯದರ್ಶಿ ಆರೀಫ್ ಪಡುಬಿದ್ರೆ, ಪತ್ರಿಕಾ ಭವನ ಟ್ರಸ್ಟ್ ಅಧ್ಯಕ್ಷ ರಾಮಕೃಷ್ಣ, ಜಿಲ್ಲಾ ಸಂಘದ ಉಪಾಧ್ಯಕ್ಷ ಭಾಸ್ಕರ ರೈ ಕಟ್ಟ, ರಾಜೇಶ್ ಕೆ.ಪೂಜಾರಿ, ಅನ್ಸಾರ್ ಇನೋಳಿ, ಕೋಶಾಧ್ಯಕ್ಷ ಪುಷ್ಟಪರಾಜ್ ಬಿ.ಎನ್. ಬಂಟ್ವಾಳ ಸಂಘದ ಅಧ್ಯಕ್ಷ ಪ್ರಶಾಂತ್ ಪುಂಜಾಲಕಟ್ಟೆ, ಜಿಲ್ಲಾ ಸಂಘದ ಪದಾಧಿಕಾರಿಗಳು ಮತ್ತು ಸದಸ್ಯರು ಇದ್ದರು.