ಪಠ್ಯ ಮರುಪರಿಷ್ಕರಣೆ ವಿರೋಧಿಸುವವರನ್ನು ಮಾತುಕತೆಗೆ ಆಹ್ವಾನಿಸಿ: ಸಿಎಂಗೆ ಪ್ರೊ.ಬರಗೂರು ರಾಮಚಂದ್ರಪ್ಪ ಪತ್ರ

ಬರಗೂರು ರಾಮಚಂದ್ರಪ್ಪ
ಬೆಂಗಳೂರು, ಜೂ.4: ರಾಜ್ಯದಲ್ಲಿ ಪಠ್ಯಪರಿಷ್ಕರಣೆ ವಿವಾದವು ಭುಗಿಲೆದ್ದ ಬೆನ್ನಲ್ಲೇ ಮುಖ್ಯಮಂತ್ರಿ ಅವರು ಶಿಕ್ಷಣ ಸಚಿವರ ಮಾಹಿತಿ ಆಧರಿಸಿ ಪತ್ರಿಕಾ ಪ್ರಕಟಣೆ ಹೊರಡಿಸಿದ್ದಾರೆ. ಆದರೆ ಪ್ರತಿರೋಧಿಸುತ್ತಿರುವ ಸಂಸ್ಥೆ, ವ್ಯಕ್ತಿಗಳನ್ನು ಕರೆದು ಮಾತನಾಡಿ ತೀರ್ಮಾನಕ್ಕೆ ಬರುವುದು ಪ್ರಜಾಸತ್ತಾತ್ಮಕ ಸರಕಾರದ ಜವಾಬ್ದಾರಿಯಾಗಿದೆ. ಹಾಗಾಗಿ ಮರುಪರಿಷ್ಕರಣೆ ವಿರೋಧಿಸುತ್ತಿರುವವರನ್ನು ಮಾತುಕತೆಗೆ ಆಹ್ವಾನಿಸಬೇಕು ಎಂದು ಬಂಡಾಯ ಸಾಹಿತಿ ಬರಗೂರು ರಾಮಚಂದ್ರಪ್ಪ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ರೋಹಿತ್ ಚಕ್ರತೀರ್ಥ ಅಧ್ಯಕ್ಷತೆಯಲ್ಲಿ ನಡೆದ ಪಠ್ಯಪರಿಷ್ಕರಣೆಯು ದಲಿತ ವಿರೋಧಿ, ಮಹಿಳಾವಿರೋಧಿ ಮತ್ತು ಸಂವಿಧಾನಾತ್ಮಕ ಸಾಮಾಜಿಕ ನ್ಯಾಯ ಮತ್ತು ಸಮಾನತೆಯ ವಿರೋಧಿ ಕ್ರಮವಾಗಿದೆ. ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು ಗೌಣವಾಗಿದೆ. ಅಷ್ಟೇ ಅಲ್ಲ, ಬಸವಣ್ಣ, ಕುವೆಂಪು ಅವರ ಆದರ್ಶಕ್ಕೂ ವಿರುದ್ಧವಾಗಿದೆ ಎಂದು ಕಿಡಿ ಕಾರಿದ್ದಾರೆ.
ಕನ್ನಡ ಭಾಷೆ ಪಠ್ಯಗಳಲ್ಲಿ ದೇವನೂರರನ್ನು ಹೊರತುಪಡಿಸಿ ಎಲ್ಲಾ ದಲಿತ ಮೂಲದ ಸಾಹಿತಿಗಳ ರಚನೆಗಳನ್ನು ತೆಗೆಯಲಾಗಿದೆ. ಬಹುಪಾಲು ಮಹಿಳಾ ಸಾಹಿತಿಗಳ ರಚನೆಗಳನ್ನು ಬಿಡಲಾಗಿದೆ. ಬುದ್ಧ, ಅಂಬೇಡ್ಕರ್ ಅಂಥವರ ವಸ್ತುವುಳ್ಳ ಕವನಗಳನ್ನು, ಬೌದ್ಧಧರ್ಮ ಮತ್ತು ಜೈನ ಧರ್ಮದ ವಿವರಗಳನ್ನು ತೆಗೆಯಲಾಗಿದೆ. ಅಂಬೇಡ್ಕರ್ ಅವರ ಮಹಾಡ್ ಸತ್ಯಾಗ್ರಹ, ನಾಸಿಕ್ ದೇವಾಲಯ ಪ್ರವೇಶದಂತಹ ಅನೇಕ ಸಾಲುಗಳು ಮರುಪರಿಷ್ಕರಣೆಯಲ್ಲಿ ಇಲ್ಲವಾಗಿವೆ. ನಾರಾಯಣ ಗುರು ಕುರಿತ ಪಾಠವನ್ನು ಬಿಟ್ಟಿದ್ದು, ಮತ್ತೆ ಸೇರಿಸುವುದಾಗಿ ಹೇಳುತ್ತಿದ್ದಾರೆ ಎಂದು ಮಾಹಿತಿ ನೀಡಿದ ಅವರು, ಪರಿಷ್ಕರಣೆಯಲ್ಲಿ ತೆಗೆದದ್ದು, ಸೇರಿಸಿದ್ದು ಯಾರನ್ನು, ಎಂತಹ ಪಾಠವನ್ನು ಎಂಬುದನ್ನು ಪರಿಶೀಲಿಸಬೇಕು ಎಂದು ಪ್ರಶ್ನಿಸಿದ್ದಾರೆ.
ಬಸವಣ್ಣನವರ ವಿಷಯದಲ್ಲಿ 6ನೇ ತರಗತಿಯ ಸಮಾಜ ವಿಜ್ಞಾನ ಭಾಗ-2 ಹಾಗೂ 9ನೇ ತರಗತಿಯ ಸಮಾಜ ವಿಜ್ಞಾನ ಭಾಗ-1ರಲ್ಲಿ ಅಲ್ಪಸ್ವಲ್ಪ ಬದಲಾವಣೆ ಮಾಡಿದ್ದಾರೆ. ಬಸವಣ್ಣನವರು ವೈದಿಕ ಮೂಲ ಮೌಢ್ಯಾಚರಣೆಗಳನ್ನು ವಿರೋಧಿಸಿದ್ದು, ಯಜ್ಞೋಪವೀತವನ್ನು ಕಿತ್ತೆಸೆದದ್ದು, ಉನ್ನತಾಧಿಕಾರದಲ್ಲಿದ್ದರೂ ಚಳವಳಿ ಕಟ್ಟಿದ್ದು, ‘ದೇಹವೇ ದೇಗುಲ’ ಎಂಬ ಪರಿಕಲ್ಪನೆಯನ್ನು ಪರಿಷ್ಕರಣೆಯಲ್ಲಿ ಕೈಬಿಡಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ನಮ್ಮ ಸಮಿತಿಯು ಎಲ್ಲ ಭಾಗದ ಸಾಹಿತಿಗಳ ಪಾಠವನ್ನು ಸೇರಿಸಿ, ಕುವೆಂಪು ಅವರ ಅಖಂಡ ಕರ್ನಾಟಕ ಪರಿಕಲ್ಪನೆ ಮತ್ತು ಸಾಮಾಜಿಕ ನ್ಯಾಯ ಕಲ್ಪನೆಗೆ ನ್ಯಾಯ ಒದಗಿಸಲಾಗಿತ್ತು. ಹಾಗಾಗಿ ಕುವೆಂಪು ಅವರ ಬಗ್ಗೆ ಮುಖ್ಯಮಂತ್ರಿ ಅವರು ನೀಡಿದ ಸಂಖ್ಯಾ ಮಾಹಿತಿಯಿಂದ, ನಾಡಗೀತೆ, ನಾಡಧ್ವಜ, ಕನ್ನಡ ಭಾಷೆಗಳಿಗೆ ಮಾಡಿದ ಅವಮಾನಕ್ಕೆ ಖಂಡಿತ ರಿಯಾಯಿತಿ ಸಿಗುವುದಿಲ್ಲ ಎಂದು ತಿಳಿಸಿದ್ದಾರೆ.
ಬೆಂಗಳೂರು ನಿರ್ಮಾಪಕ ಕೆಂಪೇಗೌಡರ ಬಗ್ಗೆ ‘ಯಲಹಂಕ ನಾಡಪ್ರಭುಗಳು’ ಎಂಬ ಪಾಠ ಈಗಾಗಲೇ ಇದ್ದು, ನಮ್ಮ ಪರಿಷ್ಕರಣೆ ಪಠ್ಯದಲ್ಲಿ ಬೆಂಗಳೂರು, ರಾಮನಗರ, ತುಮಕೂರು, ಅವಿಭಜಿತ ಕೋಲಾರ ಜಿಲ್ಲೆಗಳ ವಿವರಣೆಯನ್ನು ನೀಡಲಾಗಿತ್ತು. ಆದರೆ, ಮರುಪರಿಷ್ಕರಣೆಯಲ್ಲಿ ಯಲಹಂಕ ನಾಡಪ್ರಭುಗಳ ಆಳ್ವಿಕೆಯ ವಿಸ್ತೀರ್ಣವನ್ನು ಬೆಂಗಳೂರು ಜಿಲ್ಲೆಗೆ ಮಾತ್ರ ಸೀಮಿತಗೊಳಿಸಿದ್ದಾರೆ. ಹಾಗಾಗಿ, ಮುಖ್ಯಮಂತ್ರಿಯವರು ತಿಳಿಸಿರುವ ಹೊಸಪಾಠವನ್ನು ಎಲ್ಲಿ ಸೇರಿಸಿದ್ದಾರೆ ಎಂದು ಸ್ಪಷ್ಟಪಡಿಸುವಂತೆ ಅವರು ಒತ್ತಾಯಿಸಿದ್ದಾರೆ.







