ಬೆಂಗಳೂರು | ವಂಚನೆ ಆರೋಪ: ಸಿನೆಮಾ ನಿರ್ಮಾಪಕ ಸೇರಿ ಹಲವರ ಸೆರೆ

ಸಾಂದರ್ಭಿಕ ಚಿತ್ರ
ಬೆಂಗಳೂರು, ಜೂ.4: ಸಿನಿಮಾಗೆ ಬಂಡವಾಳ ಹಾಕಿ ಕೈ ಸುಟ್ಟುಕೊಂಡು ವಂಚನೆಗಿಳಿದಿದ್ದ ಆರೋಪದಡಿ ಸಿನೆಮಾ ನಿರ್ಮಾಪಕ ಸೇರಿ ನಾಲ್ವರನ್ನು ರಾಜಾಜಿನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ.
ರಿಯಲ್ ಎಸ್ಟೇಟ್ ಹೆಸರಿನಲ್ಲಿ ವಂಚನೆ ನಡೆಸಿದ್ದ ನಿರ್ಮಾಪಕ ಮಂಜುನಾಥ್, ಶಿವಕುಮಾರ್, ಗೋಪಾಲ್ ಹಾಗೂ ಚಂದ್ರಶೇಖರ್ ಬಂಧಿತ ಆರೋಪಿಗಳೆಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿ ಮಂಜುನಾಥ್ ಹಾಸ್ಯನಟ ಕೋಮಲ್ಕುಮಾರ್ ಅಭಿನಯದ ಲೊಡ್ಡೆ ಸಿನಿಮಾ ನಿರ್ಮಾಣಕ್ಕೆ ಕೋಟ್ಯಂತರ ರೂ. ಬಂಡವಾಳ ಹಾಕಿದ್ದ. ಆ ಸಿನಿಮಾ ಬಿಡುಗಡೆಯಾಗಿ ಸೋತಿದ್ದರಿಂದ ನಷ್ಟ ಅನುಭವಿಸಿದ್ದ. ಅದರ ಬೆನ್ನಲ್ಲೇ ನಿರ್ಮಾಪಕ ಮಂಜುನಾಥ್ ರಾಜಾಜಿನಗರದಲ್ಲಿ ಮನೆ, ನಿವೇಶನಗಳನ್ನು ಮಾರಾಟ ಮಾಡಿಸುವ ರಿಯಲ್ಎಸ್ಟೇಟ್ ಕಂಪೆನಿ ಆರಂಭಿಸಿದ್ದ ಎನ್ನಲಾಗಿದೆ.
ಕಂಪೆನಿ ಹೆಸರಲ್ಲಿ ಕಚೇರಿ ತೆರೆದು ನಿವೇಶನ ಮಾರಾಟ ಮಾಡುವುದಾಗಿ ಜಾಹೀರಾತು ನೀಡಿದ್ದ. ಪುಷ್ಪಕುಮಾರ್ ಎಂಬಾತ ಜಾಹೀರಾತು ನೋಡಿ ನಿರ್ಮಾಪಕ ಮಂಜುನಾಥ್ನನ್ನು ಸಂಪರ್ಕಿಸಿದ್ದು ಕಡಿಮೆ ಬೆಲೆಗೆ ನಿವೇಶನ ಕೊಡಿಸುವುದಾಗಿ ಹಂತ ಹಂತವಾಗಿ 2 ಲಕ್ಷ ರೂ.ಗಳನ್ನು ಆರೋಪಿ ಮಂಜುನಾಥ್ ತೆಗೆದುಕೊಂಡಿದ್ದ.
ಅಷ್ಟೇ ಅಲ್ಲದೇ ಬೇರೆ ಯಾರದ್ದೋ ನಿವೇಶನ ತೋರಿಸಿ ಕೊಡಿಸುವುದಾಗಿ ನಂಬಿಸಿದ್ದು ತಕ್ಕ ದಾಖಲೆಗಳು ಕೇಳಿದಾಗ ನಿರ್ಮಾಪಕನ ಬಂಡವಾಳ ಬಯಲಿಗೆ ಬಂದಿದೆ. ಈ ಸಂಬಂಧ ಪುಷ್ಪಕುಮಾರ್ ರಾಜಾಜಿನಗರ ಠಾಣೆಗೆ ದೂರು ನೀಡಿದ್ದು ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.







