ಪ್ರಾಮಾಣಿಕವಾಗಿ ಪರೀಕ್ಷೆ ಬರೆದವರ ಪರ ನಿಂತ ಶಾಸಕರು; ನೇಮಕಾತಿ ಆದೇಶ ನೀಡುವಂತೆ ಗೃಹ ಸಚಿವರಿಗೆ ಪತ್ರ
ಪಿಎಸ್ಸೈ ನೇಮಕಾತಿಯಲ್ಲಿ ಅಕ್ರಮ ಪ್ರಕರಣ

ಫೈಲ್ ಚಿತ್ರ
ಬೆಂಗಳೂರು, ಜೂ. 4: ಪೊಲಿಸ್ ಸಬ್ ಇನ್ಸ್ಪೆಕ್ಟರ್(ಪಿಎಸ್ಸೈ) ನೇಮಕಾತಿ ಅಕ್ರಮ ಸಂಬಂಧ ಬಿಜೆಪಿ ಸೇರಿದಂತೆ ವಿಪಕ್ಷಗಳ ಕೆಲ ಶಾಸಕರು, ಪ್ರಾಮಾಣಿಕವಾಗಿ ಪರೀಕ್ಷೆ ಬರೆದ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ನೀಡುವಂತೆ ಕೋರಿ ಗೃಹ ಸಚಿವ ಆರಗ ಜ್ಞಾನೇಂದ್ರ ಅವರಿಗೆ ಪತ್ರ ಬರೆದಿದ್ದಾರೆ.
ಆಡಳಿತಾರೂಢ ಬಿಜೆಪಿ ಶಾಸಕ ಪಿ.ರಾಜೀವ್ ಸಹಿತ ಒಂಭತ್ತು ಶಾಸಕರ ಪತ್ರ ಬರೆದಿದ್ದು, ಆ ಪೈಕಿ ಆರು ಮಂದಿ ಬಿಜೆಪಿಯ ಶಾಸಕರು, ಇಬ್ಬರು ಕಾಂಗ್ರೆಸ್ ಮತ್ತು ಒರ್ವ ಜೆಡಿಎಸ್ ಶಾಸಕರಾಗಿದ್ದಾರೆಂದು ಗೊತ್ತಾಗಿದೆ.
ಶಾಸಕರಾದ ಸುನೀಲ್ ಬಿ.ನಾಯ್ಕ್, ರಘುಪತಿ ಭಟ್, ರಾಜ್ಕುಮಾರ್ ಪಾಟೀಲ್ ತೇಲ್ಕೂರ, ಲಾಲಾಜಿ ಆರ್. ಮೆಂಡನ್, ಹರೀಶ್ ಪೂಂಜಾ, ಕಾಂಗ್ರೆಸ್ನ ಜೆ.ಎನ್.ಗಣೇಶ್, ಕೆ.ರಾಘವೇಂದ್ರ ಹಿಟ್ನಾಳ್ ಮತ್ತು ಜೆಡಿಎಸ್ನ ಕೆ.ಎಸ್.ಲಿಂಗೇಶ್ ಅವರು ಪತ್ರ ಬರೆದಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಪಿಎಸ್ಸೈ ನೇಮಕ ಅಕ್ರಮ ಎಸಗಿದವರನ್ನು ಆಧುನಿಕ ತಂತ್ರಜ್ಞಾನ ಬಳಸಿ ಪತ್ತೆ ಮಾಡಬಹುದು. ಹೀಗಾಗಿ ಅಕ್ರಮ ಎಸಗಿದವರನ್ನು ಪತ್ತೆ ಮಾಡಿ ಶಿಕ್ಷೆಗೊಳಪಡಿಸಬೇಕು ಎಂದು ಶಾಸಕರು ಒತ್ತಾಯಿಸಿದ್ದಾರೆ.
ಒಟ್ಟು 545 ಪಿಎಸ್ಸೈ ಹುದ್ದೆಗಳ ನೇಮಕ ಸಂಬಂಧ ಅಕ್ರಮ ಆರೋಪದ ಹಿನ್ನೆಲೆಯಲ್ಲಿ ಸರಕಾರ ಸಿಐಡಿ ತನಿಖೆ ಪ್ರಗತಿಯಲ್ಲಿ ಈಗಾಗಲೇ ಹಲವು ಮಂದಿಯನ್ನು ಬಂಧಿಸಿದೆ. ಈ ಮಧ್ಯೆ ಶಾಸಕರು ನೇಮಕ ಆದೇಶ ನೀಡಲು ಸರಕಾರದ ಮೇಲೆ ಒತ್ತಡ ಹೇರುತ್ತಿರುವುದು ಚರ್ಚೆಗೆ ಗ್ರಾಸವಾಗಿದೆ.







