ಜಾತಿಗಣತಿಗೆ ಬಿಜೆಪಿಯ ಆಕ್ಷೇಪಗಳ ಕುರಿತು ಪ್ರಶ್ನೆಗಳನ್ನು ಬದಿಗೊತ್ತಿದ ಬಿಹಾರ ಸಿ ಎಂ ನಿತೀಶ್ ಕುಮಾರ್

ಪಾಟ್ನಾ,ಜೂ.4: ರಾಜ್ಯದಲ್ಲಿ ಉದ್ದೇಶಿತ ಜಾತಿಗಣತಿಯ ಬಗ್ಗೆ ಮಿತ್ರಪಕ್ಷ ಬಿಜೆಪಿ ವ್ಯಕ್ತಪಡಿಸಿರುವ ಆತಂಕಗಳ ಕುರಿತು ಪ್ರಶ್ನೆಯೊಂದನ್ನು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಶನಿವಾರ ಬದಿಗೊತ್ತಿದರು.
ಜಾತಿಗಣತಿಯ ವ್ಯಾಪ್ತಿಯಿಂದ ‘ರೋಹಿಂಗ್ಯಾ’ಗಳನ್ನು ಹೊರಗಿರಿಸಬೇಕು ಎಂಬ ರಾಜ್ಯ ಬಿಜಿಪಿ ಅಧ್ಯಕ್ಷ ಸಂಜಯ ಜೈಸ್ವಾಲ್ ಅವರ ಬೇಡಿಕೆ ಕುರಿತು ಸುದ್ದಿಗಾರರ ಪ್ರಶ್ನೆಗೆ ನಿತೀಶ್,‘ನನಗೆ ಗೊತ್ತಿಲ್ಲ’ಎಂದು ಚುಟುಕಾಗಿ ಉತ್ತರಿಸಿದರು.
ಈ ವಾರದ ಪೂರ್ವಾರ್ಧದಲ್ಲಿ ಕರೆಯಲಾಗಿದ್ದ ಸರ್ವಪಕ್ಷ ಸಭೆಯು ರಾಜ್ಯದಲ್ಲಿ ಜಾತಿಗಣತಿಗೆ ಒಪ್ಪಿಗೆ ನೀಡಿದ ಬಳಿಕ ಜೈಸ್ವಾಲ್ ಅವರು,ತನ್ನ ಪಕ್ಷವು ಜಾತಿಗಣತಿಯನ್ನು ಬೆಂಬಲಿಸಿದೆ,ಆದರೆ ಕೆಲವು ಕಳವಳಗಳನ್ನು ಹೊಂದಿದೆ ಎಂದು ತನ್ನ ಫೇಸ್‌ಬುಕ್ ಪೋಸ್ಟ್‌ನಲ್ಲಿ ತಿಳಿಸಿದ್ದರು. ತಾನು ಸಭೆಯಲ್ಲಿಯೂ ಈ ಕಳವಳಗಳನ್ನು ವ್ಯಕ್ತಪಡಿಸಿದ್ದಾಗಿ ಅವರು ಹೇಳಿದ್ದರು.
ಗಣತಿಯು ಬಾಂಗ್ಲಾದೇಶಿಗಳು ಅಥವಾ ಮ್ಯಾನ್ಮಾರ್‌ನ ರೋಹಿಂಗ್ಯಾಗಳಂತಹ ವಿದೇಶಿ ನುಸುಳುಕೋರರನ್ನು ಒಳಗೊಂಡಿರುವುದಿಲ್ಲ ಎನ್ನುವುದನ್ನು ಖಚಿತಪಡಿಸಬೇಕು, ಇಲ್ಲದಿದ್ದರೆ ಅವರು ಕಾನೂನಾನತ್ಮಕ ಸಮ್ಮತಿಯನ್ನು ಪಡೆಯಬಹುದು ಎಂದು ಜೈಸ್ವಾಲ್ ಹೇಳಿದ್ದರು.
ಸೀಮಾಂಚಲ ಪ್ರದೇಶದಲ್ಲಿ ಮೇಲ್ಜಾತಿಯ ಶೇಖ್ ಮುಸ್ಲಿಮರು ಮೀಸಲಾತಿಯ ಲಾಭಗಳಿಗಾಗಿ ಒಬಿಸಿ ವರ್ಗಕ್ಕೆ ಸೇರಿದವರು ಎಂದು ಸುಳ್ಳು ಹೇಳುವುದರಲ್ಲಿ ಹೆಸರಾಗಿದ್ದಾರೆ ಎನ್ನುವುದು ಜೈಸ್ವಾಲ್ ಎತ್ತಿದ ಇನ್ನೊಂದು ವಿವಾದಾತ್ಮಕ ಅಂಶವಾಗಿದ್ದು,ಇಂತಹ ಅಸಮಂಜಸತೆಗಳಿಗೆ ಗಣತಿಯು ಅಂತ್ಯ ಹಾಡಬೇಕು ಎಂದು ಪ್ರತಿಪಾದಿಸಿದ್ದಾರೆ.
ಮುಸ್ಲಿಮರಲ್ಲಿ ಜನಪ್ರಿಯರಾಗಿರುವ ನಿತೀಶ ಬಿಜೆಪಿಯ ಈ ನಿಲುವಿನಿಂದ ಅಸಮಾಧಾನಗೊಳ್ಳುವ ಸಾಧ್ಯತೆಯಿದೆ ಎನ್ನಲಾಗಿದೆ.







