'ಸಂವಿಧಾನ ಶಿಲ್ಪಿ ಅಂಬೇಡ್ಕರ್' ಸಾಲುಗಳಿಗೆ ಕತ್ತರಿ ಹಾಕಿದ ಪಠ್ಯಪುಸ್ತಕ ಮರುಪರಿಷ್ಕರಣೆ ಸಮಿತಿ: ನೆಟ್ಟಿಗರ ಆಕ್ರೋಶ

ಬೆಂಗಳೂರು: ರೋಹಿತ್ ಚಕ್ರತೀರ್ಥ ನೇತೃತ್ವದ ಪಠ್ಯಪುಸ್ತಕ ಪುನರ್ ಪರಿಷ್ಕರಣ ಸಮಿತಿಯು ಪಠ್ಯಪುಸ್ತಕಗಳಲ್ಲಿ ತಂದ ವಿವಾದಿತ ಮಾರ್ಪಾಡುಗಳು ಹಾಗೂ ರೋಹಿತ್ ಚಕ್ರತೀರ್ಥ ಅವರ ನಾಡಗೀತೆ, ಧ್ವಜ ಹಾಗೂ ಸಾಹಿತಿಗಳನ್ನು ಅವಹೇಳನ ಮಾಡಿದ ಹಳೆಯ ಪೋಸ್ಟ್‌ಗಳು ರಾಜ್ಯದಲ್ಲಿ ಜನಾಕ್ರೋಶಕ್ಕೆ ಈಡಾಗಿರುವಾಗಲೇ, ಡಾ. ಬಿ ಆರ್ ಅಂಬೇಡ್ಕರ್ ಅವರ ಕೆಲವು ವಿಚಾರಗಳಿಗೂ ಪುನರ್ ಪರಿಷ್ಕರಣ ಸಮಿತಿಯು ಕತ್ತರಿ ಹಾಕಿದೆ ಎಂದು ಆರೋಪ ಕೇಳಿ ಬಂದಿದೆ.
ಒಂಭತ್ತನೇ ತರಗತಿಯ ಸಮಾಜ ವಿಜ್ಞಾನ ಭಾಗ-1 ರಲ್ಲಿನ ‘ರಾಜ್ಯಶಾಸ್ತ್ರ’ ವಿಭಾಗದಲ್ಲಿ ಬರುವ ‘ನಮ್ಮ ಸಂವಿಧಾನ’ ಪಾಠದಲ್ಲಿ ಅಂಬೇಡ್ಕರ್ ವಿಚಾರಗಳಿಗೆ ಕತ್ತರಿ ಹಾಕಿರುವುದು ಸದ್ಯ ಲಭ್ಯವಿರುವ ಪಠ್ಯಪುಸ್ತಕ ಪ್ರತಿಯಲ್ಲಿ ಬೆಳಕಿಗೆ ಬಂದಿದೆ. ಈ ಪಠ್ಯದಲ್ಲಿ ʼಸಂವಿಧಾನ ಶಿಲ್ಪಿʼ ಎಂಬ ವಾಕ್ಯವನ್ನೇ ಕಿತ್ತು ಹಾಕಲಾಗಿದೆ. ಹಿಂದಿನ ಪಠ್ಯದಲ್ಲಿ “ಸಂವಿಧಾನ ರಚನೆಗೆ ನೀಡಿದ ಕೊಡುಗೆಯನ್ನು ಆಧರಿಸಿ ಅವರನ್ನು ʼಸಂವಿಧಾನ ಶಿಲ್ಪಿʼ ಎಂದು ಕರೆಯಲಾಗಿದೆ” ಎಂಬ ವಾಕ್ಯವಿತ್ತು. ಈ ವಾಕ್ಯವನ್ನೇ ಕಿತ್ತು ಹಾಕಿರುವುದು ಆಕ್ರೋಶಕ್ಕೆ ಗುರಿಯಾಗಿದೆ.
ಅಲ್ಲದೆ, “ಕರಡು ಸಮಿತಿಯಲ್ಲಿ ಎನ್.ಗೋಪಾಲಸ್ವಾಮಿ ಅಯ್ಯಂಗಾರ್, ಅಲ್ಲಾಡಿ ಕೃಷ್ಣಸ್ವಾಮಿ ಅಯ್ಯರ್, ಕೆ.ಎಂ.ಮುನ್ಷಿ, ಟಿ.ಟಿ.ಕೃಷ್ಣಮಾಚಾರಿ, ಮಹಮ್ಮದ್ ಸಾದುಲ್ಲಾ, ಸಿ.ಮಾಧವರಾವ್ ಅವರು ಸದಸ್ಯರಾಗಿದ್ದರು” ಎಂಬ ವಾಕ್ಯವೂ ಈ ಹಿಂದಿನ ಪರಿಷ್ಕೃತ ಪಠ್ಯದಲ್ಲಿತ್ತು. ಆದರೆ, ರೋಹಿತ್ ಚಕ್ರತೀರ್ಥ ನೇತೃತ್ವದ ಸಮಿತಿಯು “ಮಹಮ್ಮದ್ ಸಾದುಲ್ಲಾ, ಸಿ.ಮಾಧವರಾವ್” ಎಂಬ ಕೊನೆಯ ಎರಡು ಹೆಸರುಗಳನ್ನು ಕೂಡಾ ಕಿತ್ತು ಹಾಕಿರುವುದು ಕಂಡು ಬಂದಿದೆ. ಕೇವಲ ಮಹಮ್ಮದ್ ಸಾದುಲ್ಲಾ ಅವರ ಹೆಸರು ಕಿತ್ತು ಉಳಿದವರ ಹೆಸರು ಹಾಕಿದರೆ ವಿವಾದವಾಗಬಹುದು ಎಂದು ಕೊನೆಯ ಇಬ್ಬರ ಹೆಸರನ್ನೂ ಕಿತ್ತಿರಬಹುದು ಎಂಬ ಚರ್ಚೆಯೂ ಸಾಮಾಜಿಕ ಮಾಧ್ಯಮದಲ್ಲಿ ನಡೆಯುತ್ತಿದೆ.
ಅಂಬೇಡ್ಕರ್ ಕುರಿತು ರೋಹಿತ್ ಚಕ್ರತೀರ್ಥ ಹಾಕಿದ್ದರೆನ್ನಲಾದ ಅವಹೇಳನಕಾರಿ ಕಾಮೆಂಟ್ ಗಳು ಕಳೆದ ಕೆಲವು ದಿನಗಳಿಂದ ಸಾಮಾಜಿಕ ಮಾಧ್ಯಮಗಳಲ್ಲಿ ಆಕ್ರೋಶಕ್ಕೆ ಕಾರಣವಾಗಿತ್ತು. ಸದ್ಯ, ಪಠ್ಯದಲ್ಲಿ ಅಂಬೇಡ್ಕರ್ ಅವರ ವಿಷಯಗಳಿಗೆ ಕತ್ತರಿ ಹಾಕುವ ಮೂಲಕ ತಮ್ಮ ವೈಯಕ್ತಿಕ ನಿಲುವನ್ನು ಪಠ್ಯ ಪುಸ್ತಕಗಳ ಮೂಲಕ ಮಕ್ಕಳಿಗೆ ಹೇರಲು ಹೊರಟಿದ್ದಾರೆ ಎಂಬ ಆರೋಪಗಳೂ ಕೇಳತೊಡಗಿವೆ. ಈ ಬೆಳವಣಿಗೆ ಬಗ್ಗೆ ನಾಡಿನ ಹಿರಿಯ ಚಿಂತಕರು, ಜನಪರ ಹೋರಾಟಗಾರರು ಆತಂಕ ವ್ಯಕ್ತಪಡಿಸಿದ್ದು ಇಷ್ಟೆಲ್ಲಾ ಪ್ರಮಾದಗಳು, ತಪ್ಪುಗಳು ಇರುವ ಪುನರ್ ಪರಿಷ್ಕರಣ ಸಮಿತಿಯ ಪರಿಷ್ಕರಣೆಯನ್ನೇ ರದ್ದುಗೊಳಿಸುವಂತೆ ಆಗ್ರಹಿಸುತ್ತಿದ್ದಾರೆ.

ರೋಹಿತ್ ಚಕ್ರತೀರ್ಥ ನೇತೃತ್ವದ ಪಠ್ಯಪುಸ್ತಕ ʼಮರು-ಪರಿಷ್ಕರಣʼ ಸಮಿತಿಯ ಪಾಠ

ಬರಗೂರು ರಾಮಚಂದ್ರಪ್ಪ ನೇತೃತ್ವದ ಪಠ್ಯಪುಸ್ತಕ ಪರಿಷ್ಕರಣ ಸಮಿತಿಯ ಪಾಠ







