ಉತ್ತರ ಪ್ರದೇಶ:ದಲಿತ ಬಾಲಕಿಯ ಸಾಮೂಹಿಕ ಅತ್ಯಾಚಾರ,ಹತ್ಯೆ

ಚಿತ್ರಕೂಟ,ಜೂ.4: ಸಾಮೂಹಿಕ ಅತ್ಯಾಚಾರಕ್ಕೊಳಗಾಗಿದ್ದ 13ರ ಹರೆಯದ ದಲಿತ ಬಾಲಕಿ ಚಿಕಿತ್ಸೆಯ ವೇಳೆ ಮೃತಪಟ್ಟಿದ್ದು,ಘಟನೆಗೆ ಸಂಬಂಧಿಸಿದಂತೆ ಈವರೆಗೆ ಮೂವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.
ಪಹಾಡಿ ಪೊಲೀಸ್ ಠಾಣಾ ವ್ಯಾಪ್ತಿಯ ನಿವಾಸಿಯಾಗಿದ್ದ ಬಾಲಕಿ ಬುಧವಾರ ರಾತ್ರಿ ತನ್ನ ಕುಟುಂಬದೊಂದಿಗೆ ಮನೆಯ ಹೊರಗೆ ಮಲಗಿದ್ದಾಗ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿತ್ತು ಎಂದು ಎಸ್‌ಪಿ ಅತುಲ್ ಶರ್ಮಾ ತಿಳಿಸಿದರು.
ಘಟನೆಯ ಕುರಿತು ಕುಟುಂಬ ಸದಸ್ಯರು ತಕ್ಷಣ ಪೊಲೀಸರಿಗೆ ಮಾಹಿತಿಯನ್ನು ನೀಡಿರಲಿಲ್ಲ ಮತ್ತು ಆಕೆಯನ್ನು ಚಿಕಿತ್ಸೆಗಾಗಿ ಕೌಶಾಂಬಿ ಜಿಲ್ಲೆಗೆ ಕರೆದೊಯ್ದಿದ್ದರು. ಗುರುವಾರ ರಾತ್ರಿ ಬಾಲಕಿ ಕೊನೆಯುಸಿರೆಳೆದಿದ್ದಳು.
ಬಾಲಕಿಯ ಕುಟುಂಬದವರು ಘಟನೆಯ ಬಗ್ಗೆ ಯಾರಿಗೂ ತಿಳಿಸಿರಲಿಲ್ಲ ಮತ್ತು ಶುಕ್ರವಾರ ಶವವನ್ನು ಮನೆಗೆ ತಂದಿದ್ದರು ಎಂದು ತಿಳಿಸಿದ ಶರ್ಮಾ,ಘಟನೆಗೆ ಸಂಬಂಧಿಸಿದಂತೆ ನದೀಂ,ಆದರ್ಶ ಪಾಂಡೆ ಮತ್ತು ವಿಪುಲ್ ಮಿಶ್ರಾ ಎನ್ನುವವರನ್ನು ಬಂಧಿಸಲಾಗಿದೆ. ಮರಣೋತ್ತರ ಪರೀಕ್ಷೆಯ ವರದಿಗಾಗಿ ಕಾಯುತ್ತಿದ್ದೇವೆ ಎಂದರು.
ಬಾಲಕಿ ಗುರುವಾರ ಬೆಳಿಗ್ಗೆ ಎರಡೂ ಕೈಗಳನ್ನು ಕಟ್ಟಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಳು. ವಿಷಯವನ್ನು ಮುಚ್ಚಿಟ್ಟಿದ್ದಕ್ಕಾಗಿ ಕುಟುಂಬದ ಸದಸ್ಯರನ್ನೂ ವಿಚಾರಣೆ ನಡೆಸಲಾಗುವುದು ಎಂದು ಠಾಣಾಧಿಕಾರಿ ತಿಳಿಸಿದರು.







