ಅಮೆರಿಕ ಅಧ್ಯಕ್ಷರ ಸ್ಥಳಾಂತರ : ಕಾರಣ ಏನು ಗೊತ್ತೇ?
ರೆಹಬೊತ್ (ಅಮೆರಿಕ): ಸಣ್ಣ ಖಾಸಗಿ ವಿಮಾನವೊಂದು ಪ್ರಮಾದವಶಾತ್ ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರ ಬೀಚ್ ಹೌಸ್‍ನ ಮೇಲೆ ನಿರ್ಬಂಧಿತ ವಾಯುಪ್ರದೇಶ ಪ್ರವೇಶಿಸಿದ ಹಿನ್ನೆಲೆಯಲ್ಲಿ ಅವರನ್ನು ಹಾಗೂ ಅಮೆರಿಕದ ಪ್ರಥಮ ಮಹಿಳೆಯನ್ನು ಭದ್ರತಾ ಸಿಬ್ಬಂದಿ ಸುರಕ್ಷಿತ ಸ್ಥಳಕ್ಕೆ ದಿಢೀರನೇ ಸ್ಥಳಾಂತರಿಸಿದರು ಎಂದು ಶ್ವೇತಭವನ ಪ್ರಕಟಿಸಿದೆ.
"ಅಧ್ಯಕ್ಷರು ಮತ್ತು ಪ್ರಥಮ ಮಹಿಳೆ ಸುರಕ್ಷಿತವಾಗಿದ್ದಾರೆ ಹಾಗೂ ಇದು ಯಾವುದೇ ದಾಳಿ ಅಲ್ಲ" ಎಂದು ಶ್ವೇತಭವನ ಸ್ಪಷ್ಟಪಡಿಸಿದೆ. ವಾಷಿಂಗ್ಟನ್‍ನಿಂದ ಪೂರ್ವಕ್ಕೆ 200 ಕಿಲೋಮೀಟರ್ ದೂರದ ರೆಹಬೊತ್‍ನಲ್ಲಿ ಈ ಘಟನೆ ಸಂಭವಿಸಿದೆ.
ಬೈಡನ್ ಹಾಗೂ ಜಿಲ್ ಬೈಡನ್ ಆ ಬಳಿಕ ತಮ್ಮ ನಿವಾಸಕ್ಕೆ ಮರಳಿದರು ಎಂದು ಅಧಿಕಾರಿಗಳು ಹೇಳಿದ್ದಾರೆ. ವಿಮಾನ ಪ್ರಮಾದವಶಾತ್ ನಿರ್ಬಂಧಿತ ಸ್ಥಳ ಪ್ರವೇಶಿಸಿದ್ದು, ತಕ್ಷಣವೇ ಅದನ್ನು ಬೆಂಗಾವಲಿನಲ್ಲಿ ಹೊರಹಾಕಲಾಯಿತು ಎಂದು ಅಧ್ಯಕ್ಷರ ಸುರಕ್ಷತೆಯ ಹೊಣೆ ಹೊತ್ತಿರುವ ರಹಸ್ಯ ಸೇವೆಗಳ ವಿಭಾಗ ಸ್ಪಷ್ಟಪಡಿಸಿದೆ.
ಇತರ ತಪ್ಪುಗಳ ಜತೆಗೆ, ಪೈಲಟ್ ಸೂಕ್ತ ರೇಡಿಯೊ ಚಾನಲ್‍ನಲ್ಲಿ ಇರಲಿಲ್ಲ ಹಾಗೂ ಪ್ರಕಟಿತ ವಿಮಾನದ ಮಾರ್ಗಸೂಚಿ ಪಾಲಿಸುತ್ತಿರಲಿಲ್ಲ ಎಂದು ರಹಸ್ಯ ಸೇವೆಗಳ ವಿಭಾಗದ ವಕ್ತಾರ ಆಂಥೋನಿ ಹೇಳಿದ್ದಾರೆ.