ಮಂಗಳೂರು : ಹಜ್ ಯಾತ್ರಿಕರಿಗೆ ಲಸಿಕೆ ಶಿಬಿರ

ಮಂಗಳೂರು, ಜೂ.5: ಕೇಂದ್ರ ಹಜ್ ಕಮಿಟಿಯ ಮೂಲಕ ಈ ವರ್ಷದ ಹಜ್ ಯಾತ್ರೆಗೆ ತೆರಳುವ ಯಾತ್ರಿಕರಿಗೆ ಲಸಿಕೆ ನೀಡುವ ಕಾರ್ಯಕ್ರಮವು ರವಿವಾರ ನಗರದ ಯೆನೆಪೊಯ ಆಸ್ಪತ್ರೆಯಲ್ಲಿ ನಡೆಯಿತು.
ಕೇಂದ್ರ ಹಜ್ ಕಮಿಟಿಯ ಅಧ್ಯಕ್ಷ ಅಬ್ದುಲ್ಲಾ ಕುಟ್ಟಿ ಲಸಿಕಾ ಶಿಬಿರವನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಮಂಗಳೂರಿನಲ್ಲಿ ಹಜ್ ಭವನ ನಿರ್ಮಾಣಕ್ಕೆ ಇನ್ನೂ ಜಮೀನು ಲಭ್ಯವಾಗಿಲ್ಲ. ಜಮೀನು ಸಿಕ್ಕರೆ ಹಜ್ ಭವನ ನಿರ್ಮಿಸಲಾಗುವುದು. ಅಲ್ಲದೆ ಕೇಂದ್ರ ಸಮಿತಿಯಿಂದ ಹಜ್ ಭವನ ನಿರ್ಮಾಣಕ್ಕೆ ಅನುದಾನ ನೀಡಲಾಗುವುದು ಎಂದರು.
ಈ ಬಾರಿ ಬೆಂಗಳೂರಿನಿಂದ ಹಜ್ ಯಾತ್ರೆಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಮುಂದಿನ ವರ್ಷದಿಂದ ಮಂಗಳೂರಿನಿಂದ ಹಜ್ ಯಾತ್ರೆಗೆ ತೆರಳಲು ವ್ಯವಸ್ಥೆ ಕಲ್ಪಿಸಲಾಗುವುದು ಎಂದರು.
ಶಾಸಕ ಯು.ಟಿ.ಖಾದರ್ ಮಾತನಾಡಿದರು. ಯೆನೆಪೊಯ ಮಸೀದಿಯ ಇಮಾಮ್ ಜಿಎಂ ಇಸ್ಮಾಯಿಲ್ ಮದನಿ ದುಆಗೈದರು. ಕಾರ್ಯಕ್ರಮದಲ್ಲಿ ಯೆನೆಪೊಯ ಆಸ್ಪತ್ರೆಯ ನಿರ್ದೇಶಕ ಡಾ. ತ್ವಾಹಿರ್ ಯೆನೆಪೊಯ, ರಾಜ್ಯ ಹಜ್ ಕಮಿಟಿಯ ಅಧಿಕಾರಿ ಫಿರೋಝ್ ಪಾಷಾ, ಮಾಜಿ ಶಾಸಕ ಮೊಯ್ದಿನ್ ಬಾವ, ದ.ಕ. ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷ ಅಬ್ದುಲ್ ನಾಸಿರ್ ಲಕ್ಕಿಸ್ಟಾರ್, ಉಪಾಧ್ಯಕ್ಷರಾದ ಎ.ಕೆ. ಜಮಾಲ್, ಫಕೀರಬ್ಬ, ರಾಜ್ಯ ಹಜ್ ಕಮಿಟಿಯ ಸದಸ್ಯ ಮುಹಮ್ಮದ್ ಹನೀಫ್ ನಿಝಾಮಿ, ಮಾಜಿ ಮೇಯರ್ ಕೆ.ಅಶ್ರಫ್, ಹಜ್ ನಿರ್ವಹಣಾ ಸಮಿತಿಯ ಹನೀಫ್ ಹಾಜಿ ಬಂದರ್, ಮಹ್ಮೂದ್ ಹಾಜಿ, ಅಹ್ಮದ್ ಬಾವಾ ಬಜಾಲ್, ಅಝೀಝ್ ಬೈಕಂಪಾಡಿ, ಸಿಎಂ ಮುಸ್ತಫಾ ಮತ್ತಿತರರು ಉಪಸ್ಥಿತರಿದ್ದರು.
ದಕ್ಷಿಣ ಕನ್ನಡ, ಉಡುಪಿ ಹಾಗೂ ಕೊಡಗು ಜಿಲ್ಲೆಯ ಹಜ್ ಯಾತ್ರಿಕರಿಗೆ ಲಸಿಕೆ ನೀಡಲಾಯಿತು.