ಧಾರ್ಮಿಕ ವ್ಯಕ್ತಿಗಳಿಗೆ ಅಪಮಾನಿಸುವುದನ್ನು ಪಕ್ಷ ಖಂಡಿಸುತ್ತದೆ: ಪ್ರವಾದಿ ಕುರಿತು ವಕ್ತಾರೆಯ ಹೇಳಿಕೆಗೆ ಬಿಜೆಪಿ ಉತ್ತರ

Photo:PTI
ಹೊಸದಿಲ್ಲಿ: ಪ್ರವಾದಿ ಮುಹಮ್ಮದ್ ಅವರ ಕುರಿತು ಬಿಜೆಪಿ ವಕ್ತಾರೆ ನೂಪುರ್ ಶರ್ಮಾ ಅವರ ಅವಹೇಳನಕಾರಿ ಹೇಳಿಕೆಗೆ ಭಾರೀ ಆಕ್ರೋಶವಾಗಿ ಹಿಂಸಾಚಾರ ನಡೆದ ಬೆನ್ನಿಗೆ "ಯಾವುದೇ ಧಾರ್ಮಿಕ ವ್ಯಕ್ತಿಗಳನ್ನು ಅವಮಾನಿಸುವುದನ್ನು ಪಕ್ಷ ಬಲವಾಗಿ ಖಂಡಿಸುತ್ತದೆ" ಎಂದು ಬಿಜೆಪಿ ರವಿವಾರ ಹೇಳಿಕೊಂಡಿದೆ. ಆದಾಗ್ಯೂ, ಪಕ್ಷವು ಯಾವುದೇ ಘಟನೆ ಅಥವಾ ಹೇಳಿಕೆಯನ್ನು ನೇರವಾಗಿ ಉಲ್ಲೇಖಿಸಿಲ್ಲ.
"ಭಾರತದ ಸಾವಿರಾರು ವರ್ಷಗಳ ಇತಿಹಾಸದಲ್ಲಿ ಪ್ರತಿಯೊಂದು ಧರ್ಮವು ಅರಳಿತು ಹಾಗೂ ಪ್ರವರ್ಧಮಾನಕ್ಕೆ ಬಂದಿದೆ. ಭಾರತೀಯ ಜನತಾ ಪಕ್ಷವು ಎಲ್ಲಾ ಧರ್ಮಗಳನ್ನು ಗೌರವಿಸುತ್ತದೆ. ಯಾವುದೇ ಧರ್ಮದ ಯಾವುದೇ ಧಾರ್ಮಿಕ ವ್ಯಕ್ತಿಗಳನ್ನು ಅವಮಾನಿಸುವುದನ್ನು ಬಿಜೆಪಿ ಬಲವಾಗಿ ಖಂಡಿಸುತ್ತದೆ" ಎಂದು ಅದು ಹೇಳಿಕೆಯೊಂದರಲ್ಲಿ ತಿಳಿಸಿದೆ.
"ಯಾವುದೇ ಪಂಥ ಅಥವಾ ಧರ್ಮವನ್ನು ಅವಮಾನಿಸುವ ಯಾವುದೇ ಸಿದ್ಧಾಂತವನ್ನು ಭಾರತೀಯ ಜನತಾ ಪಕ್ಷವು ಬಲವಾಗಿ ವಿರೋಧಿಸುತ್ತದೆ. ಬಿಜೆಪಿ ಅಂತಹ ಜನರನ್ನು ಅಥವಾ ತತ್ವಶಾಸ್ತ್ರವನ್ನು ಪ್ರಚಾರ ಮಾಡುವುದಿಲ್ಲ" ಎಂದು ಅದು ಹೇಳಿದೆ.
"ಭಾರತದ ಸಂವಿಧಾನವು ಪ್ರತಿಯೊಬ್ಬ ಪ್ರಜೆಗೂ ತನ್ನ ಆಯ್ಕೆಯ ಯಾವುದೇ ಧರ್ಮವನ್ನು ಆಚರಿಸಲು ಮತ್ತು ಪ್ರತಿ ಧರ್ಮವನ್ನು ಗೌರವಿಸಲು ಹಕ್ಕನ್ನು ನೀಡುತ್ತದೆ" ಎಂದು ಪಕ್ಷವು ಹೇಳಿದೆ.
“ಭಾರತವು ತನ್ನ ಸ್ವಾತಂತ್ರ್ಯದ 75 ನೇ ವರ್ಷವನ್ನು ಆಚರಿಸುತ್ತಿರುವಾಗ ಭಾರತವನ್ನು ಎಲ್ಲರೂ ಸಮಾನರು ಮತ್ತು ಎಲ್ಲರೂ ಗೌರವದಿಂದ ಬದುಕುವ ಶ್ರೇಷ್ಠ ದೇಶವನ್ನಾಗಿ ಮಾಡಲು ನಾವು ಬದ್ಧರಾಗಿದ್ದೇವೆ. ಅಲ್ಲಿ ಎಲ್ಲರೂ ಭಾರತದ ಏಕತೆ ಮತ್ತು ಸಮಗ್ರತೆಗೆ ಬದ್ಧರಾಗಿದ್ದಾರೆ. ಅಲ್ಲಿ ಎಲ್ಲರೂ ಬೆಳವಣಿಗೆ ಮತ್ತು ಅಭಿವೃದ್ಧಿಯ ಫಲವನ್ನು ಆನಂದಿಸುತ್ತಾರೆ'' ಎಂದು ಹೇಳಲಾಗಿದೆ.
ಕಳೆದ ವಾರ ಟಿವಿ ಚರ್ಚೆಯೊಂದರ ವೇಳೆ ಬಿಜೆಪಿ ವಕ್ತಾರೆ ನೂಪುರ್ ಶರ್ಮಾ ಪ್ರವಾದಿಯನ್ನು ಅವಮಾನಿಸುವಂತೆ ನೀಡಿದ ಹೇಳಿಕೆಯು ಮುಸ್ಲಿಂ ಸಮುದಾಯದ ಭಾರೀ ಆಕ್ರೋಶ ಮತ್ತು ಪ್ರತಿಭಟನೆಗೆ ಕಾರಣವಾಗಿತ್ತು.







