ಸದಾಶಿವ ಆಯೋಗದ ವರದಿ ಜಾರಿಗೆ ಚರ್ಚೆ ನಡೆದರೂ, ಇನ್ನೂ ಜಾರಿಯಾಗಿಲ್ಲ: ಡಾ.ಎಲ್. ಹನುಮಂತಯ್ಯ

ಬೆಂಗಳೂರು, ಜೂ. 5: ‘ಪರಿಶಿಷ್ಟರ ಮೀಸಲಾತಿ ವರ್ಗೀಕರಣ ಸಂಬಂಧ ನ್ಯಾ.ಎ.ಜೆ.ಸದಾಶಿವ ಆಯೋಗದ ವರದಿ ಜಾರಿಗಾಗಿ ಎಲ್ಲ ರಾಜಕೀಯ ಪಕ್ಷಗಳು ಚರ್ಚೆ ನಡೆಸುತ್ತಿವೆ. ಕೇಶವ ಕೃಪಾದಲ್ಲಿಯೂ ವರದಿ ಜಾರಿಗಾಗಿ ಸಭೆಯ ನಡೆದಿದೆ. ಆದರೂ ವರದಿ ಇನ್ನೂ ಜಾರಿಯಾಗಿಲ್ಲ’ ಎಂದು ರಾಜ್ಯಸಭಾ ಸದಸ್ಯ ಡಾ.ಎಲ್.ಹನುಮಂತಯ್ಯ ಅವರು ಆಕ್ಷೇಪಿಸಿದ್ದಾರೆ.
ರವಿವಾರ ನಗರದ ಗಾಂಧಿ ಭವನದಲ್ಲಿ ಮಾದಿಗ ಮಹಾಸಭಾ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಆಯೋಜಿಸಿದ್ದ ‘ಮೀಸಲಾತಿ ಮತ್ತು ಒಳಮೀಸಲಾತಿಯ ತಲ್ಲಣಗಳು-ಅವಲೋಕನ’ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ‘ಪರಿಶಿಷ್ಟ ಜಾತಿಯ ಮೀಸಲಾತಿ ವರ್ಗೀಕರಣಕ್ಕೆ ಸಂಬಂಧಿಸಿದಂತೆ ರಚಿಸಿದ್ದ ಸದಾಶಿವ ಆಯೋಗವು ವರದಿಯನ್ನು ಸಲ್ಲಿಸಿ ಆರು ವರ್ಷ ಕಳೆದಿದೆ. ಆದರೆ ಇದುವರೆಗೂ ಜಾರಿಯಾಗಿಲ್ಲ. ಕಾಂಗ್ರೇಸ್ ಸರಕಾರ ಇದ್ದಾಗ, ಜಾರಿಗೆ ಮಾಡಿಲ್ಲ. ಹಾಗಾಗಿ ಮಾದಿಗ ಸಮಾಜವು ಬಿಜೆಪಿಗೆ ಮತ ನೀಡಿತು. ಆದರೆ ಬಿಜೆಪಿ ಸರಕಾರವೂ ಜಾರಿಗೆ ಮಾಡಿಲ್ಲ. ಅಧಿಕಾರ ಬಂದ ದಿನದಿಂದ ಇಲ್ಲಿಯವರೆಗೂ ವಿಧಾನಸಭೆಯಲ್ಲಿ ಚರ್ಚೆಗಳು ನಡೆದಿಲ್ಲ’ ಎಂದು ಹೇಳಿದರು.
‘ದಲಿತರಲ್ಲದ ಜನಪ್ರತಿನಿಧಿಗಳು ಸದಾಶಿವ ಆಯೋಗದ ವರದಿಯನ್ನು ಜಾರಿಗೊಳಿಸಲು ಚರ್ಚಿಸುತ್ತಾರೆ. ಕೆಲವರು ತಮ್ಮ ಕ್ಷೇತ್ರದಲ್ಲಿ ಬಹುಸಂಖ್ಯಾತರಾದ ಮಾದಿಗರ ಮತಗಳು ನಿರ್ಣಾಯಕ ಆಗಿರುವುದರಿಂದ ಅವರ ಮತಕ್ಕಾಗಿ ಚರ್ಚಿಸಿದರೆ, ಮತ್ತೇ ಕೆಲವು ಸಾಮಾಜಿಕ ನ್ಯಾಯಕ್ಕಾಗಿ ಚರ್ಚಿಸುತ್ತಿದ್ದಾರೆ. ಆದರೆ ನಮ್ಮ ಸಮುದಾಯದವರು ಈ ಬಗ್ಗೆ ಕ್ರಮ ತೆಗೆದುಕೊಳ್ಳುತ್ತಿಲ್ಲ’ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಬಹುಜನ ಸಮಾಜವಾದಿ ಪಕ್ಷದ ಮುಖಂಡ ಮಾರಸಂದ್ರ ಮುನಿಯಪ್ಪ ಮಾತನಾಡಿ, ‘ಬಹುಸಂಖ್ಯಾತರಾದ ನಾವು ನಮ್ಮ ವಿರೋಧಿಗಳಿಗೆ ಅಧಿಕಾರವನ್ನು ಕೊಟ್ಟು, ಅವರ ಬಳಿಯೇ ಮೀಸಲಾತಿ ಕೇಳುತ್ತಿದ್ದೇವೆ. ಸ್ವತಂತ್ರ ಬಂದು 75 ವರ್ಷ ಕಳೆದರೂ, ಹಳ್ಳಿಗಳಲ್ಲಿ ದಲಿತರು ಮರಣ ಹೊಂದಿದರೆ ಸ್ಮಶಾನವಿಲ್ಲದೆ, ಸರಕಾರಿ ಕಚೇರಿಗಳ ಮುಂದೆ ಹೋರಾಟ ಮಾಡಬೇಕಾದ ಪರಿಸ್ಥಿತಿ ಮುಂದುವರೆದಿದೆ ಎಂದು ಟೀಕಿಸಿದರು.
ದೇಶದಲ್ಲಿ ಮೀಸಲಾತಿ ಪರಿಕಲ್ಪನೆ ಎಂಬುದು 2 ಸಾವಿರ ವರ್ಷಗಳ ಹಿಂದೆ ಅಸ್ಥಿತ್ವದಲ್ಲಿತ್ತು. ವಿದ್ಯಾಭ್ಯಾಸ ಬ್ರಾಹ್ಮಣರಿಗೆ, ಆಡಳಿತ ಕ್ಷತ್ರೀಯರಿಗೆ, ವ್ಯಾಪಾರ ವೈಶ್ಯರಿಗೆ ಮೀಸಲಾಗಿತ್ತು. ಆದರೆ ಸಂವಿಧಾನದಲ್ಲಿ ಮೀಸಲಾತಿಯನ್ನು ನೀಡಿದಾಗ ವಿರೋಧಿಸಿದರು. ಹಿಂದುಳಿದ ವರ್ಗಗಳಿಗೆ ಮೀಸಲಾತಿಯನ್ನು ನೀಡಿದಾಗಲೂ, ದಲಿತರಿಗೆ ಮತ್ತೆ ಮೀಸಲಾತಿ ನೀಡುತ್ತಿದ್ದಾರೆಂದು ದಿಕ್ಕು ತಪ್ಪಿಸಲಾಯಿತು. ಈಗ ಒಳಮೀಸಲಾತಿ ಬಗ್ಗೆಯೂ ಈ ರೀತಿ ಮಾತನಾಡುತ್ತಿದ್ದಾರೆ ಎಂದು ಅವರು ಹೇಳಿದರು. ಕಾರ್ಯಕ್ರಮದಲ್ಲಿ ನಿವೃತ್ತ ನ್ಯಾ.ಎ.ಜೆ. ಸದಾಶಿವ, ಎಂ.ರೇವಣ್ಣ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
‘ಅಂಬೇಡ್ಕರ್ ಭಾವಚಿತ್ರಕ್ಕೆ ಅವಮಾನ ಮಾಡಿದ ಮಲ್ಲಿಕಾರ್ಜುನಗೌಡನ್ನು ಬಂಧಿಸಲು ಪ್ರತಿಭಟನೆಯನ್ನು ಮಾಡಲಾಯಿತು. ಆದರೆ, ಯಾವುದೇ ಕಾನೂನು ಕ್ರಮವನ್ನು ಸರಕಾರವು ತೆಗೆದುಕೊಂಡಿಲ್ಲ. ಏಕೆಂದರೆ ಅಧಿಕಾರ ನಮ್ಮ ಕೈಯಲ್ಲಿಲ್ಲ. ಬಹುಸಂಖ್ಯೆಯಲ್ಲಿ ದಲಿತ ಸಮುದಾಯದವರು ಇದ್ದರೂ, ಇದುವರೆಗೂ ದಲಿತ ಮುಖ್ಯಮಂತ್ರಿ ನೇಮಕವಾಗಿಲ್ಲ'
-ಮಾರಸಂದ್ರ ಮುನಿಯಪ್ಪ, ಬಿಎಸ್ಪಿ ಮುಖಂಡ
‘ನ್ಯಾ.ಸದಾಶಿವ ಆಯೋಗ ವರದಿಯನ್ನು ಜಾರಿಗೊಳಿಸಲು ಭೋವಿ, ಲಂಬಾಣಿ ಸಮುದಾಯದವರೊಂದಿಗೆ ಮಾತುಕತೆ ನಡೆಸುವುದು ಅಗತ್ಯ. ವರದಿ ಜಾರಿಯಾದರೆ ಈ ಸಮುದಾಯಗಳನ್ನು ಪರಿಶಿಷ್ಟ ಜಾತಿ ಪಟ್ಟಿಯಿಂದ ತೆಗೆಯುವ ಕೈಬಿಡುವ ಭಯ ಆ ಸಮುದಾಯಗಳಿಗೆ ಇದೆ. ಹಾಗಾಗಿ ಭೋವಿ ಸಮುದಾಯದ ಸ್ವಾಮಿಗಳ ಜತೆ ಮಾತುಕತೆ ನಡೆಸಲಾಗಿದೆ. ಸಮುದಾಯದ ಜನಪ್ರತಿನಿಧಿಗಳೂ ಮಾತುಕತೆ ನಡೆಸಬೇಕು. ಅದನ್ನು ಹೊರತುಪಡಿಸಿ, ಹಿಂದೆ ಇರುವುದಾಗಿ ತಿಳಿಸಿ, ಮುಖಂಡರನ್ನು ಹೋರಾಟಕ್ಕೆ ಪ್ರಚೋದನೆ ಸಲ್ಲ'
-ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮಿ, ಮಾದಾರ ಚನ್ನಯ್ಯ ಗುರುಪೀಠ







