ಕುಂದಾಪುರ: ಸ್ವಯಂ ಪ್ರೇರಿತ ರಕ್ತದಾನ ಶಿಬಿರ
ಕುಂದಾಪುರ, ಜೂ.೫: ಕುಂದಾಪುರ ಬಿಲ್ಲವ ಸಮಾಜ ಸೇವಾ ಸಂಘದ ಆಶ್ರಯದಲ್ಲಿ ಶ್ರೀನಾರಾಯಣ ಗುರು ಯುವಕ ಮಂಡಲ ಕುಂದಾಪುರ ಮತ್ತು ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಕುಂದಾಪುರ ರಕ್ತನಿಧಿ ಕೇಂದ್ರಗಳ ಸಹಭಾಗಿತ್ವದಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರವು ರವಿವಾರ ಕುಂದಾಪುರದ ಶ್ರೀ ನಾರಾಯಣಗುರು ಕಲ್ಯಾಣ ಮಂಟಪದಲ್ಲಿ ಜರಗಿತು.
ಕಾರ್ಯಕ್ರಮವನ್ನು ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಕುಂದಾಪುರದ ಅಧ್ಯಕ್ಷ ಎಸ್.ಜಯಕರ್ ಶೆಟ್ಟಿ ಉದ್ಘಾಟಿಸಿದರು. ಉಡುಪಿ ಜಿಲ್ಲೆ ಆಹಾರ ಸುರಕ್ಷಿತ ಮತ್ತು ಗುಣಮಟ್ಟ ಪ್ರಾಧಿಕಾರದ ಅಂಕಿತ ಅಧಿಕಾರಿ ಡಾ.ಪ್ರೇಮಾನಂದ ಕೆ. ಮಾತನಾಡಿ, ತಿಂಗಳಿಗೆ ೫೦೦ ಯುನಿಟ್ ರಕ್ತದ ಅಗತ್ಯವಿದ್ದು ಕೋವಿಡ್ ಹಿನ್ನೆಲೆಯಲ್ಲಿ ರಕ್ತದಾನ ಶಿಬಿರ ಕಡಿಮೆಯಾಗುತ್ತಿರುವುದರಿಂದ ರಕ್ತದ ಅಭಾವ ಕಂಡುಬರುತ್ತಿದೆ. ರಕ್ತದಾನದಲ್ಲಿ ಇದೀಗ ವೈಜ್ಞಾನಿಕ ಮಾದರಿ ಕೂಡ ಬಂದಿದೆ. ರಕ್ತದಲ್ಲಿ ಯಾವ ಅಂಶ ಯಾರಿಗೇ ಬೇಕೋ ಅದನ್ನು ಬೇರ್ಪಡಿಸಿ ನೀಡುವ ತಾಂತ್ರಿಕತೆ ಬಂದಿದೆ ಎಂದು ತಿಳಿಸಿದರು.
ಒಬ್ಬ ವ್ಯಕ್ತಿ ನೀಡುವ ಒಂದು ಯುನಿಟ್ ರಕ್ತದಲ್ಲಿ ವಿಂಗಡನೆ ಮಾಡಿ ೪ ಜನರಿಗೆ ನೀಡಬಹುದು. ಪ್ರತಿ ಮೂರು ತಿಂಗಳಿಗೊಮ್ಮೆ ರಕ್ತ ದಾನ ಮಾಡಲು ಒಬ್ಬ ವ್ಯಕ್ತಿ ಅರ್ಹನಾಗಿರುತ್ತಾನೆ. ಈ ನಿಟ್ಟಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ಸ್ವಯಂಪ್ರೇರಿತ ರಕ್ತದಾನದಲ್ಲಿ ಭಾಗಿಯಾಗುವ ಮೂಲಕ ಜೀವ ಉಳಿಸುವ ಸೇವಾ ಕೈಂಕರ್ಯದಲ್ಲಿ ತೊಡಗಿಸಿಕೊಳ್ಳಬೇಕು ಎಂದರು.
ಅಧ್ಯಕ್ಷತೆಯನ್ನು ವಹಿಸಿದ್ದ ಕುಂದಾಪುರ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಅಶೋಕ್ ಪೂಜಾರಿ ಬೀಜಾಡಿ ಮಾತನಾಡಿ, ರಕ್ತದಾನವು ಜೀವ ಉಳಿಸುವ ಜೊತೆಗೆ ಸಂಬಂಧ, ಸ್ನೇಹವನ್ನು ಬೆಸೆಯುವ ಕೊಂಡಿಯಾಗಿದೆ. ಕರಾವಳಿ ಭಾಗದಲ್ಲಿ ರಕ್ತದಾನದ ಬಗ್ಗೆ ಕೆಲವು ಗೊಂದಲಗಳಿದ್ದು ಇದೀಗ ನಿವಾರಣೆಯಾಗಿ ಯುವಕರು, ಮಹಿಳೆಯರು ರಕ್ತದಾನದಲ್ಲಿ ಪಾಲ್ಗೊಳ್ಳಲು ಆರಂಭಿಸಿದ್ದಾರೆ. ಕುಂದಾಪುರ ಭಾಗದಲ್ಲಿ ರಕ್ತದ ಕೊರತೆ ನಿವಾರಣೆಗೆ ರಕ್ತದಾನ ಶಿಬಿರವನ್ನು ಒಂದು ಕ್ರಾಂತಿಯಾಗಿ ಮಾಡಬೇಕು ಎಂದು ಹೇಳಿದರು.
ಈ ವೇಳೆ ಇತ್ತೀಚೆಗೆ ಕಳ್ಳತನ ಪ್ರಕರಣವನ್ನು ತಡೆಯಲು ಎದೆಗಾರಿಕೆ ತೋರಿದ ಬೀಜಾಡಿಯ ಅಜಯ್ ಪೂಜಾರಿ ಅವರನ್ನು ಗೌರವಿಸಲಾಯಿತು. ಕುಂದಾಪುರ ನಾರಾಯಣಗುರು ಸಾಂಸ್ಕೃತಿಕ ಮತ್ತು ದತ್ತಿ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಭಾಸ್ಕರ ವಿಠಲವಾಡಿ, ನಾರಾಯಣ ಗುರು ಯುವಕ ಮಂಡಲದ ಅಧ್ಯಕ್ಷ ಅಜಿತ್ ಪೂಜಾರಿ ರಂಗನಹಿತ್ಲು, ಪ್ರಧಾನ ಕಾರ್ಯದರ್ಶಿ ಬಸವ ಪೂಜಾರಿ ಹೊದ್ರಾಳಿ, ವಿಜಯ್ ಎಸ್.ಪೂಜಾರಿ ಉಪಸ್ಥಿತರಿದ್ದರು.
ಕುಂದಾಪುರ ಬಿಲ್ಲವ ಸಮಾಜ ಸೇವಾ ಸಂಘದ ಜೊತೆ ಕಾರ್ಯದರ್ಶಿ ರಾಜೇಶ್ ಕಡ್ಗಿಮನೆ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.