ಮಂಗಳೂರು: ಮಿಯಾವಾಕಿ-ಅರ್ಬನ್ ಫಾರೆಸ್ಟ್ ಉದ್ಘಾಟನೆ
ಮಂಗಳೂರು : ಮಂಗಳೂರು ಮಹಾನಗರ ಪಾಲಿಕೆ, ವನ ಚಾರಿಟೇಬಲ್ ಟ್ರಸ್ಟ್ ಮತ್ತು ಸಿಂಜಿನ್ ಸಂಸ್ಥೆ ವತಿ ಯಿಂದ ಮಿಯಾವಾಕಿ - ಅರ್ಬನ್ ಫಾರೆಸ್ಟ್ ಉದ್ಘಾಟನಾ ಕಾರ್ಯಕ್ರಮವು ರವಿವಾರ ನಗರದ ನಂತೂರು ಪಾದುವಾ ಶಿಕ್ಷಣ ಸಂಸ್ಥೆಯ ಬಳಿ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕ ಡಿ.ವೇದವ್ಯಾಸ ಕಾಮತ್ ಮಂಗಳೂರು ನಗರ ಬೆಳೆಯುತ್ತಿದೆ. ಅಭಿವೃದ್ಧಿಯ ವೇಳೆ ಕೆಲವೆಡೆ ಮರಗಳನ್ನು ಕಡಿಯಲಾಗುತ್ತಿದೆ. ಹಿಂದೆ ಶೇ.೨೨ರಷ್ಟು ಹಸಿರು ಪ್ರದೇಶವಿದ್ದರೆ, ಅದೀಗ ಶೇ.೧೦ಕ್ಕೆ ಇಳಿದಿದೆ. ಬಂದರು ಮತ್ತಿತರ ಕೆಲವು ವಾರ್ಡ್‌ಗಳಲ್ಲಿ ಶೇ.೨ಕ್ಕೆ ಇಳಿದಿರುವುದು ಗಂಭೀರ ವಿಚಾರ ಎಂದರು.
ಹಸಿರು ನಾಶದಿಂದ ಪರಿಸರದಲ್ಲಿ ಅಸಮತೋಲನ ಉಂಟಾಗಿ ಭವಿಷ್ಯದಲ್ಲಿ ಹೊಸದಿಲ್ಲಿಯಂತೆ ಉಸಿರಾಟಕ್ಕೂ ಸಮಸ್ಯೆಯಾಗುವ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ಮಹಾನಗರ ಪಾಲಿಕೆಯು ಮಿಯಾವಾಕಿ-ಅರ್ಬನ್ ಫಾರೆಸ್ಟ್ ನಿರ್ಮಾಣಕ್ಕೆ ೩೨ ಕಡೆ ಜಾಗ ಗುರುತಿಸಿದೆ. ಅದಕ್ಕೆ ನೀರಿನ ಸಂಪರ್ಕ ಕಲ್ಪಿಸಲಿದೆ. ಸೀಮಿತ ಜಾಗವನ್ನು ಸದ್ಬಳಕೆ ಮಾಡಿಕೊಂಡು ಶಬ್ದ, ಧೂಳಿನ ಮಾಲಿನ್ಯ ತಡೆ, ಶುದ್ಧ ಗಾಳಿ, ನೆರಳು, ಪಕ್ಷಿಗಳಿಗೆ ಹಣ್ಣಿನ ವ್ಯವಸ್ಥೆ ಕಲ್ಪಿಸಲು ಪ್ರಯತ್ನಿಸಲಾಗುತ್ತಿದೆ ಎಂದರು.
ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಮಾತನಾಡಿ, ಜಿಲ್ಲೆಯಲ್ಲಿ ತುಂಬಾ ಹಸಿರು ಪ್ರದೇಶವಿದೆ. ಹಲವು ಕಾರಣ ಗಳಿಗಾಗಿ ಈ ಪ್ರದೇಶ ನಾಶವಾಗುತ್ತಿದೆ. ಮನುಷ್ಯ ಎಂದೂ ಪರಿಸರದ ಜತೆ ಸಂಘರ್ಷಕ್ಕೆ ಇಳಿಯಬಾರದು. ಒಂದು ಮರ ತೆಗೆಯಬೇಕಾದರೂ ಹಲವು ಬಾರಿ ಯೋಚಿಸಬೇಕು. ಇಲ್ಲದಿದ್ದಲ್ಲಿ ಗಂಭೀರ ಪರಿಣಾಮ ಎದುರಿಸ ಬೇಕಾದೀತು ಎಂದು ಎಚ್ಚರಿಸಿದರು.
ಮೇಯರ್ ಪ್ರೇಮಾನಂದ ಶೆಟ್ಟಿ, ಕಾರ್ಪೊರೇಟರ್ ಶಕೀಲಾ ಕಾವ, ಪಾದುವಾ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥ ಫಾದರ್ ವಿಲ್ಸನ್ ಮೊಂತೇರೊ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಪರಿಸರ ಅಧಿಕಾರಿ ಕೀರ್ತಿ ಕುಮಾರ್, ಬಯೋಕಾನ್ ಫೌಂಡೇಶನ್‌ನ ಮಿಶನ್ ಡೈರೆಕ್ಟರ್ ಡಾ. ಅನುಪಮಾ ಶೆಟ್ಟಿ, ಸಿಂಜಿನ್ ಇಂಟರ್ ನ್ಯಾಷನಲ್ ಲಿ.ನ ಸೈಟ್ ಮುಖ್ಯಸ್ಥ ರಂಗರಾವ್ ಉಪಸ್ಥಿತರಿದ್ದರು.
ಮಿಯಾವಾಕಿ ಅರ್ಬನ್ ಫಾರೆಸ್ಟ್ ನಿರ್ಮಾಣದಲ್ಲಿ ನೆರವಾದ ಮತ್ತು ನಾಯಕತ್ವ ತರಬೇತಿಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಸಿಐಎಲ್ ಫೌಂಡೇಶನ್‌ನ ನಂದಗೋಪಾಲ್ ನೇತೃತ್ವದಲ್ಲಿ ಪ್ರಮಾಣಪತ್ರ ವಿತರಿಸಲಾಯಿತು.
ವನ ಚಾರಿಟೇಬಲ್ ಟ್ರಸ್ಟ್‌ನ ಜೀತ್ ಮಿಲನ್ ರೋಚ್ ಸ್ವಾಗತಿಸಿದರು. ಸಿಂಜಿನ್ ಸಂಸ್ಥೆಯ ಕಿಶೋರ್ ಶೆಟ್ಟಿ ವಂದಿಸಿದರು. ಪತ್ರಕರ್ತ ಚೇತನ್ ಪಿಲಿಕುಳ ಕಾರ್ಯಕ್ರಮ ನಿರೂಪಿಸಿದರು.