ಸಿದ್ದರಾಮಯ್ಯ ಯಾರ್ರೀ ಕೇಳೋದಕ್ಕೆ? ಅವರು ಹೇಳಿದಂತೆ ಕೇಳಲು ಸರಕಾರ ಇರುವುದಲ್ಲ: ಸಿ.ಟಿ. ರವಿ

ಚಿಕ್ಕಮಗಳೂರು: ರಾಜ್ಯಾದ್ಯಂತ ಚಡ್ಡಿ ಸುಡುವ ಚಳವಳಿ ಆರಂಭಿಸುತ್ತೇವೆ ಎಂಬ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ತಿರುಗೇಟು ನೀಡಿದ್ದು, ಸಿದ್ದರಾಮಯ್ಯನವರಿಗೆ ಮಾಡಲು ಕೆಲಸವಿಲ್ಲ, ಅವರು ಚಡ್ಡಿ ಸುಟ್ಟುಕೊಂಡೇ ಇರಲಿ, ನಮ್ಮ ಹಳೆಯ ಚಡ್ಡಿಗಳಿದ್ದು, ಅವುಗಳನ್ನೂ ಕಳುಹಿಸಿ ಕೊಡುತ್ತೇವೆ. ಸುಟ್ಟುಕೊಂಡು ಇರಲಿ ಎಂದಿದ್ದಾರೆ.
ಬಿಜೆಪಿಗೆ ಕೋಮುನಶೆ ಏರಿದೆ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿ.ಟಿ.ರವಿ, ಹೆಡಗೆವಾರ್ ಕಂಡರೆ ಕಾಂಗ್ರೆಸ್‍ನವರಿಗೆ ಏಕೆ ಸಂಕಟವೋ ಗೊತ್ತಿಲ್ಲ, ಭಾರತ್ ಮಾತಾ ಕೀ ಜೈ ಎಂಬ ಶಿಕ್ಷಣವನ್ನು ಹೆಡಗೆವಾರ್ ಕಲಿಸಿದ್ದಾರೆಯೇ ಹೊರತು ಭಾರತಕ್ಕೆ ಬಾಂಬ್ ಹಾಕುವುದನ್ನು ಅವರು ಕಲಿಸಿಲ್ಲ. ಬಾಂಬ್ ಹಾಕುವವರು ಸಿದ್ದರಾಮಯ್ಯನವರಿಗೆ ತುಂಬಾ ಹತ್ತಿರದವರು. ಭಾರತ್ ಮಾತಾ ಕೀ ಜೈ ಎಂದರೆ ಅವರಿಗೆ ಉರಿಯುತ್ತೆ ಎಂದ ಅವರು, ಪಠ್ಯದಲ್ಲಿ ಹೆಡಗೆವಾರ್ ಭಾಷಣ ಇರಬೇಕೋ, ಬೇಡವೋ ಎನ್ನಲು ಸಿದ್ದರಾಮಯ್ಯ ಯಾರು?, ಸಿದ್ದರಾಮಯ್ಯ ಹೇಳಿದ ಹಾಗೆ ಕೇಳೋಕೆ ಸರಕಾರ ಇರೋದಲ್ಲ. ಸರಕಾರಕ್ಕೆ ಏನು ಮಾಡಬೇಕೆಂದು ತಿಳಿದಿದೆ ಎಂದರು.
ರವಿವಾರ ಚಿಕ್ಕಮಗಳೂರು ನಗರದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆ ಸಂಬಂದ ಸುದ್ದಿಗಾರರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಅವರು, ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಠೇವಣಿ ಕಳೆದುಕೊಂಡು ಮೂಲೆಗುಂಪಾಗಿದೆ. ಮುಂದಿನ ಚುನಾವಣೆಯಲ್ಲಿ ಕರ್ನಾಟಕದಲ್ಲೂ ಕಾಂಗ್ರೆಸ್ ಠೇವಣಿ ಕಳೆದುಕೊಳ್ಳಲಿದೆ. ದುರಹಂಕಾರ, ಓಲೈಕೆ ರಾಜಕಾರಣವನ್ನು ರಾಜ್ಯದ ಜನರು ಒಪ್ಪಲ್ಲ, ಕ್ಷಮಿಸುವುದೂ ಇಲ್ಲ ಎಂಬುದನ್ನೂ ಈಗಾಗಲೇ ಸಾಬೀತು ಮಾಡಿದ್ದಾರೆ ಎಂದರು.
ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಮನೆಗೆ ಬೆಂಕಿ ಬಿದ್ದಿದ್ದಾಗ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಅವರ ಬಾಯಿಯೇ ಬಂದ್ ಆಗಿತ್ತು. ಬೆಂಕಿ ಹಾಕಿದವರೆಲ್ಲ ಸಿದ್ದು, ಡಿಕೆಶಿ ಬ್ರದರ್ಸ್, ಅದಕ್ಕೆ ಅವರ ಬಾಯಿ ಬಂದ್ ಆಗಿತ್ತು. ಚಡ್ಡಿಗೆ ಬೆಂಕಿ ಹಚ್ಚುತ್ತೇವೆ ಎನ್ನುವ ಮೂಲಕ ಅವರು ಡಿಜೆಹಳ್ಳಿ, ಕೆಜೆ ಹಳ್ಳಿಯಲ್ಲಾದ ರೀತಿಯಲ್ಲಿ ಇಡೀ ರಾಜ್ಯಕ್ಕೆ ಬೆಂಕಿ ಹಚ್ಚುತ್ತಾರಾ? ಎಂದು ಪ್ರಶ್ನಿಸಿದ ಅವರು, ಕಾಂಗ್ರೆಸ್‍ನವರಿಗೆ ಒಳ್ಳೆಯದು ಬೇಡವಾಗಿದೆ, ಮತಾಂಧತೆಯನ್ನು ಬೆಳೆಸುವುದೇ ಇವರ ಗುರಿಯಂತೆ ಕಾಣುತ್ತಿದೆ. ಹಿಂದೆ ಕಾಂಗ್ರೆಸ್‍ನವರು ಮತಾಂಧತೆಗೆ ಕುಮ್ಮಕ್ಕು ನೀಡಿದ್ದರಿಂದಲೇ ದೇಶ ವಿಭಜನೆ ಆಗಿದೆ. ಈಗಲೂ ಅದನ್ನೇ ಮಾಡುತ್ತಿದ್ದು, ಕಾಂಗ್ರೆಸ್ ಸರ್ವನಾಶ ಆಗಲಿದೆ ಎಂದರು.







