ಕಿರುತೆರೆ ನಟಿ ಅಮ್ರೀನ್ ಭಟ್ ಹತ್ಯೆಗೆ ಸಮರ್ಥನೆ: ಕಾಶ್ಮೀರಿ ಧರ್ಮಗುರು ವಿರುದ್ಧ ಪ್ರಕರಣ ದಾಖಲು

Photo: ANI
ಶ್ರೀನಗರ, ಜೂ. 5: ಕಿರುತೆರೆ ನಟಿ ಅಮ್ರೀನ್ ಭಟ್ ಅವರ ಹತ್ಯೆ ಸಮರ್ಥಿಸಿಕೊಂಡ ಹಾಗೂ ದ್ವೇಷ ಹರಡಿದ ಆರೋಪದಲ್ಲಿ ಜಮ್ಮು ಹಾಗೂ ಕಾಶ್ಮೀರ ಪೊಲೀಸರು ಶನಿವಾರ ಸಾರ್ವಜನಿಕ ಸುರಕ್ಷೆ ಕಾಯ್ದೆ ಅಡಿಯಲ್ಲಿ ಧರ್ಮ ಗುರುವೊಬ್ಬರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಕಿರುತೆರೆ ನಾಟಕಗಳು ಹಾಗೂ ಸಾಮಾಜಿಕ ಮಾಧ್ಯಮದ ವೀಡಿಯೊಗಳಲ್ಲಿ ತನ್ನ ಪಾತ್ರಗಳಿಂದ ಭಟ್ ಜನಪ್ರಿಯರಾಗಿದ್ದರು.
ಅವರನ್ನು ಬುಡ್ಗಾಂವ್ ಜಿಲ್ಲೆಯ ಚಡೂರಾ ಪಟ್ಟಣದಲ್ಲಿ ಮೇ 25ರಂದು ಗುಂಡು ಹಾರಿಸಿ ಹತ್ಯೆಗೈಯಲಾಗಿತ್ತು. ಲಷ್ಕರೆ ತಯ್ಯಿಬಕ್ಕೆ ಸೇರಿದ ಮೂವರು ಉಗ್ರರು ಅವರನ್ನು ಹತ್ಯೆಗೈದಿದ್ದಾರೆ ಎಂದು ಪೊಲೀಸರ ಹೇಳಿಕೆ ತಿಳಿಸಿತ್ತು. ಪೊಲೀಸರು ಶನಿವಾರ ಬಾರಾಮುಲ್ಲಾ ಜಿಲ್ಲೆಯ ಟಾಕಿಯಾ ವಾಗೂರಾದ ನಿವಾಸಿ ಮುಹಮ್ಮದ್ ಇರ್ಫಾನ್ ಭಟ್ ಅವರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಅಮ್ರೀನ್ ಭಟ್ ಅನಾಗರಿಕತೆ ಹರಡುತ್ತಿದ್ದಾರೆ ಎಂದು ಆರೋಪಿಸಿ ವೀಡಿಯೊ ರೆಕಾರ್ಡ್ ಮಾಡಿ ಇರ್ಫಾನ್ ಭಟ್ ಅಪ್ಲೋಡ್ ಮಾಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
‘‘ಯುಟ್ಯೂಬ್ ಚಾನೆಲ್ನಲ್ಲಿ ಕಲಾವಿದೆ ಅಮ್ರೀನ್ ಭಟ್ ಅವರನ್ನು ಹತ್ಯೆಗೈದಿರುವುದನ್ನು ಸಮರ್ಥಿಸಿಕೊಳ್ಳುವ ಹಾಗೂ ಇಂತಹ ದ್ವೇಷಪೂರಿತ ವೀಡಿಯೋವನ್ನು ಅಪ್ಲೋಡ್ ಮಾಡುವ ಕಾರ್ಯವು ಚಿತ್ರಕಲೆ, ಹಾಡುಗಾರಿಕೆ, ನೃತ್ಯ ಮೊದಲಾದ ಕಲೆಗಳಲ್ಲಿ ತೊಡಗಿಕೊಂಡವರಿಗೆ ಮಾತ್ರವಲ್ಲ ಅವರ ಕುಟುಂಬಕ್ಕೂ ಭೀತಿ ಹುಟ್ಟಿಸಿದೆ’’ ಎಂದು ಪೊಲೀಸ್ ಹೇಳಿಕೆ ತಿಳಿಸಿದೆ.
ಇದಲ್ಲದೆ, ಈ ಕಾರ್ಯ ಭಯೋತ್ಪಾದಕ ಚಟುವಟಿಕೆಗಳಿಗೆ ಬೆಂಬಲ ನೀಡುತ್ತದೆ. ಇಂತಹ ದಾಳಿಗಳಲ್ಲಿ ಹೆಚ್ಚು ಜನರು ತೊಡಗಿಕೊಳ್ಳುವಂತೆ ಉತ್ತೇಜನ ನೀಡುತ್ತದೆ ಎಂದು ಹೇಳಿಕೆ ತಿಳಿಸಿದೆ. ಸಾರ್ವಜನಿಕ ಸುರಕ್ಷಾ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿದ ಬಳಿಕ ಧರ್ಮಗುರು ಮುಹಮ್ಮದ್ ಇರ್ಫಾನ್ ಭಟ್ ಅವರನ್ನು ಜಮ್ಮುವಿನ ಕೋಟ್ ಬಲ್ವಾಲ್ ಕಾರಾಗೃಹಕ್ಕೆ ಕಳುಹಿಸಲಾಗಿದೆ. ದ್ವೇಷ ಹರಡುವ ಸಾಮಾಜಿಕ ಮಾಧ್ಯಮದ ಬಳಕೆದಾರರಿಗೆ ಬುಡ್ಗಾಂವ್ ಪೊಲೀಸರು ಎಚ್ಚರಿಕೆ ಕೂಡ ನೀಡಿದ್ದಾರೆ.







