ಶೋಕಿಗಾಗಿ ಬೈಕ್, ಆಟೋಗಳ ಕಳ್ಳತನ: ಓರ್ವ ಆರೋಪಿಯ ಬಂಧನ, ವಾಹನಗಳ ವಶ

ಬೆಂಗಳೂರು, ಜೂ. 5: ಶೋಕಿಗಾಗಿ ವಾಹನಗಳನ್ನು ಕಳ್ಳತನ ಮಾಡುತ್ತಿದ್ದ ಆರೋಪಿಯೊಬ್ಬನನ್ನು ಬಂಧಿಸಿ, ಮಿನಿ ಬಸ್, ಆಟೋ ಸೇರಿ 12 ದ್ವಿಚಕ್ರ ವಾಹನಗಳನ್ನು ತಾವರೆಕರೆ ಠಾಣೆ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಬಂಧಿತ ಆರೋಪಿಯನ್ನು ಸಂಪಿಗೆಹಳ್ಳಿ ನಿವಾಸಿ ಭರತ್(20) ಎಂದು ಗುರುತಿಸಲಾಗಿದೆ. ಆರೋಪಿ ಭರತ್ ಇತರೆ ಆರೋಪಿಗಳಾದ ಪ್ರಜ್ವಲ್, ಮನೋಜ್, ಮುರುಳಿ ಜೊತೆ ಸೇರಿಕೊಂಡು ಬೈಕ್‍ಗಳನ್ನು ಕಳ್ಳತನ ಮಾಡಿ ಓಡಾಡಿಕೊಂಡು ಶೋಕಿ ಮಾಡುತ್ತಿದ್ದ. ಅಲ್ಲದೆ, ಹಣ ಸಂಪಾದನೆ ಮಾಡಲು ಕಳ್ಳತನ ಮಾಡಿದ ವಾಹನಗಳನ್ನು ಮಾರಾಟ ಮಾಡುತ್ತಿದ್ದರು ಎಂಬುದು ಪೊಲೀಸರ ವಿಚಾರಣೆಯಿಂದ ತಿಳಿದುಬಂದಿದೆ.
ಮೇ 27ರಂದು ರಾತ್ರಿ 9.45ರ ಸುಮಾರಿನಲ್ಲಿ ತಾವರೆಕೆರೆ ದೊಡ್ಡ ಆಲದ ಮರದ ರಸ್ತೆಯಲ್ಲಿ ಚಂದ್ರಶೇಖರ್ ಮತ್ತು ನರಸಿಂಹಯ್ಯ ಎಂಬುವರು ಮಿನಿಬಸ್‍ನಲ್ಲಿ ಹೋಗುತ್ತಿದ್ದರು. ಆ ಸಂದರ್ಭದಲ್ಲಿ ಆಟೋದಲ್ಲಿ ಹಿಂಬಾಲಿಸಿಕೊಂಡು ಬಂದ ನಾಲ್ವರು ದರೋಡೆಕೋರರು ಬಸ್‍ನ್ನು ಅಡ್ಡ ಹಾಕಿ ಬಸ್ಸಿನಲ್ಲಿದ್ದರಿಗೆ ಚಾಕು ತೋರಿಸಿ ಬೆದರಿಸಿ ಬಲಹಂತವಾಗಿ ಬಸ್ ತೆಗೆದುಕೊಂಡು ಹೋಗಿದ್ದ ಬಗ್ಗೆ ಚಂದ್ರಶೇಖರ್ ಅವರು ತಾವರೆಕೆರೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಈ ಹಿನ್ನೆಲೆಯಲ್ಲಿ ಪೊಲೀಸರು ಆರೋಪಿಯೊಬ್ಬನನ್ನು ಬಂಧಿಸಿ ಮಿನಿ ಬಸ್, ಬೈಕ್‍ಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಮೊಕದ್ದಮೆ ದಾಖಲಿಸಿಕೊಂಡಿರುವ ತಾವರೆಕರೆ ಠಾಣೆ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.







