ತೆಲುಗು ಕವಿ ವರವರ ರಾವ್ ಅವರ ಹೊಸ ಪುಸ್ತಕದಿಂದ ‘ಹಿಂದುತ್ವ, ಕೇಸರೀಕರಣದಂತಹ ಪದಗಳನ್ನು ಕೈ ಬಿಟ್ಟ ಪೆಂಗ್ವಿನ್

Photo: PTI
ಶ್ರೀನಗರ, ಜೂ. 5: ಪೆಂಗ್ವಿನ್ ರ್ಯಾಂಡಮ್ ಹೌಸ್ ಇಂಡಿಯಾದ ಕಾನೂನು ತಂಡ ತೆಲುಗು ಕವಿ ವರವರ ರಾವ್ ಅವರ ಹೊಸ ಪುಸ್ತಕ ‘ವರವರ ರಾವ್: ಎ ರೆವೆಲ್ಯೂಷನರಿ ಪೋಯೆಟ್’ನಿಂದ ‘ಹಿಂದುತ್ವ’, ‘ಸಂಘ ಪರಿವಾರ’ ಹಾಗೂ ‘ಕೇಸರೀಕರಣ’ದಂತಹ ಪದಗಳನ್ನು ತೆಗೆದು ಹಾಕಿದೆ ಎಂದು ಹೇಳಲಾಗಿದೆ. ಇನ್ನಷ್ಟೇ ಬಿಡುಗಡೆಯಾಗಬೇಕಾದ ಈ ಪುಸ್ತಕ ಭೀಮಾ ಕೋರೆಗಾಂವ್ ಪ್ರಕರಣಕ್ಕೆ ಸಂಬಂಧಿಸಿ ಬಂಧಿತರಾಗಿರುವ 81ರ ಹರೆಯದ ರಾವ್ ಅವರ ಮೊದಲ ಇಂಗ್ಲೀಷ್ ಅನುವಾದಿತ ಕವನ ಸಂಕಲನ. ರಾವ್ ಅವರು ಪ್ರಸ್ತುತ ವೈದ್ಯಕೀಯ ಜಾಮೀನಲ್ಲಿದ್ದಾರೆ.
ರಾವ್ ಅವರ ಹೊಸ ಪುಸ್ತಕ ಕವನ ಸಂಕಲನ. ಇದರಲ್ಲಿ 6 ದಶಕಗಳ ಕಾಲದ ಕವನಗಳು ಇವೆ. ರಾವ್ ಅವರು 1960ರಿಂದ ಹಲವು ಜನಪರ ಚಳವಳಿಗಳಲ್ಲಿ ಪಾಲ್ಗೊಂಡಿದ್ದರು. ಎಲ್ಗಾರ್ ಪರಿಷದ್-ಭೀಮಾ ಕೋರೆಗಾಂವ್ ಪ್ರಕರಣದಲ್ಲಿ ಭಾಗಿಯಾದ ಆರೋಪದಲ್ಲಿ 2018 ಆಗಸ್ಟ್ನಲ್ಲಿ ಅವರನ್ನು ಬಂಧಿಸಲಾಗಿತ್ತು. ಹಿಂದೂ ಧರ್ಮವನ್ನು ವಿಕೃತವಾಗಿ ಪ್ರಸ್ತುತಪಡಿಸಲಾಗಿದೆ ಎಂದು ಪ್ರತಿಪಾದಿಸಿ ಗುಂಪೊಂದು ದೂರು ದಾಖಲಿಸಿದ ಹಿನ್ನೆಲೆಯಲ್ಲಿ ವೆಂಡಿ ಡೊನಿಗರ್ ಅವರ ‘ದಿ ಹಿಂದೂ’ಪುಸ್ತಕವನ್ನು 2014ರಲ್ಲಿ ಪೆಂಗ್ವಿನ್ ಹಿಂಪಡೆದುಕೊಂಡಿತ್ತು.
ರಾವ್ ಅವರ ಕವನ ಸಂಕಲದಲ್ಲಿ ಕೆಲವು ಪದಗಳನ್ನು ತೆಗೆದು ಹಾಕಲಾಗಿದೆ. ದೇಶದ್ರೋಹ ಅಥವಾ ಮಾನನಷ್ಟದಂತಹ ದಮನಕಾರಿ ಕಾನೂನುಗಳ ಅಡಿಯಲ್ಲಿ ಸರಕಾರ ಆರೋಪ ಹೊರಿಸುವುದನ್ನು ತಪ್ಪಿಸಲು ಈ ಪದಗಳನ್ನು ತೆಗೆದು ಹಾಕಲಾಗಿದೆ ಎಂದು ಊಹಿಸಲಾಗಿದೆ. ಈ ಬಗ್ಗೆ ರಾವ್ ಅವರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ನ್ಯಾಯಾಲಯ ಅವರಿಗೆ ನೀಡಿದ ಜಾಮೀನಿನಲ್ಲಿ ಮಾಧ್ಯಮದೊಂದಿಗೆ ಮಾತನಾಡಬಾರದು ಎಂಬ ಷರತ್ತು ಇರುವ ಕಾರಣಕ್ಕಾಗಿ ಪ್ರತಿಕ್ರಿಯಿಸಿಲ್ಲ ಎಂದು ಅವರ ನಿಕಟವರ್ತಿಗಳು ತಿಳಿಸಿದ್ದಾರೆ.





