ಪಠ್ಯ ಪರಿಷ್ಕರಣೆ ವಿವಾದ: ಸರಕಾರ ಕಣ್ಣೋರೆಸುವ ತಂತ್ರ ಅನುಸರಿಸಿದೆ; ಸಿಪಿಐಎಂಎಲ್ ಲಿಬರೇಷನ್
ಬೆಂಗಳೂರು, ಜೂ. 5: ರೋಹಿತ್ ಚಕ್ರತೀರ್ಥ ನೇತೃತ್ವದಲ್ಲಿ ನಡೆದ ಪಠ್ಯಪರಿಷ್ಕರಣೆಯನ್ನು ಕೈಬಿಡುವಂತೆ ರಾಜ್ಯದಲ್ಲಿ ನಡೆದ ಹೋರಾಟಗಳಿಗೆ ಸರಕಾರವು ಮಣಿದು, ಪಠ್ಯಪರಿಷ್ಕಣೆ ಸಮಿತಿಯನ್ನು ಮುಖ್ಯಮಂತ್ರಿ ವಜಾ ಮಾಡಿದ್ದಾರೆ. ಆದರೆ, ಬ್ರಾಹ್ಮಣತ್ವದ ಮೌಢ್ಯಗಳನ್ನು ಬಿತ್ತುವ ಪಠ್ಯವನ್ನು ಕೈಬಿಡದೆ, ಕಣ್ಣೋರೆಸುವ ತಂತ್ರವನ್ನು ಅನುಸರಿಸಿದ್ದಾರೆ' ಎಂದು ಸಿಪಿಐಎಂಎಲ್ ಲಿಬರೇಷನ್ ಆಕ್ಷೇಪಿಸಿದೆ.
ಈ ಕುರಿತು ಪಕ್ಷವು ಪ್ರಕಟನೆ ಹೊರಡಿಸಿದ್ದು, ಬಿಜೆಪಿ ಸರಕಾರವು ಮಕ್ಕಳ ಮನಸ್ಸಿನಲ್ಲಿ ಬ್ರಾಹ್ಮಣತ್ವದ ಮೌಡ್ಯಗಳನ್ನು ತುಂಬಲು ಪಠ್ಯಪರಿಷ್ಕಣೆ ಹೆಸರಿನಲ್ಲಿ ಸಮಿತಿಯನ್ನು ರಚಿಸಿ, ವಿಕೃತ ಮನಸ್ಸಿನ ಚಕ್ರತೀರ್ಥನನ್ನು ಸಮಿತಿಯ ಅಧ್ಯಕ್ಷನನ್ನಾಗಿ ನೇಮಕ ಮಾಡಲಾಯಿತು. ಆತನ ವಕ್ರಬುದ್ಧಿಯನ್ನು ನೋಡಿದ ನಾಡಿನ ಜನತೆ ಪಠ್ಯಪರಿಷ್ಕರಣೆಯನ್ನು ಕೈ ಬಿಡುವಂತೆ ಹೋರಾಟ ಮಾಡಿದರು. ಆದರೆ ಸರಕಾರ ಸಮಿತಿಯನ್ನು ವಿಸರ್ಜನೆ ಮಾಡಿ, ಪರಿಷ್ಕೃತ ಪಠ್ಯವನ್ನು ಅಳವಡಿಸಿಕೊಳ್ಳುವುದಾಗಿ ಪ್ರಕಟನೆ ಹೊರಡಿಸಿದೆ. ಇದು ಆರ್‍ಎಸ್‍ಎಸ್‍ನ ಕಾರ್ಯಸೂಚಿಯನ್ನು ಜೀವಂತವಾಗಿಸುವ ಹುನ್ನಾರ ಎಂದು ಟೀಕಿಸಿದೆ.
ಪಠ್ಯವನ್ನು ಹಿಂಪಡೆಯದೇ ಎಷ್ಟೇ ಸ್ಪಷ್ಟೀಕರಣವನ್ನು ನೀಡಿದರೂ, ಹಿಂದುತ್ವ ತತ್ವಗಳ ಪ್ರಚಾರವನ್ನು ಒಪ್ಪಲಾಗುವುದಿಲ್ಲ. ಚಕ್ರತೀರ್ಥ ಅವರು ಮಾಡಿರುವ ವಿವಾದಿತ ಪಠ್ಯವು ಶೇ.80ರಷ್ಟು ಮುದ್ರಣವಾಗಿದ್ದು, ಶೇ.67 ಶಾಲೆಗಳಿಗೆ ವಿಸ್ತರಣೆ ಆಗಿದೆ. ಇಂತಹ ಪ್ರತ್ಯಕ್ಷ ಕೋಮುವಾದೀಕರಣವನ್ನು ಪಕ್ಷವು ಖಂಡಿಸಿದ್ದು, ಹಿಂದಿನ ಪಠ್ಯವನ್ನು ಮುಂದುವರೆಸಬೇಕು ಎಂದು ಒತ್ತಾಯಿಸಿದೆ.





