ಪರ್ಕಳ ಬಿಜೆಪಿ ನಾಯಕನ ಮನೆಯಲ್ಲಿ ಭೂಸಂತ್ರಸ್ತರ ಸಭೆ: ಕಾಂಗ್ರೆಸ್ ಆರೋಪ

ಉಡುಪಿ : ರಾಷ್ಟ್ರೀಯ ಹೆದ್ದಾರಿ ೧೬೯ ಎ ಅಗಲೀಕರಣಕ್ಕೆ ಸಂಬಂಧಿಸಿ ಪರ್ಕಳದ ಭೂಸಂತ್ರಸ್ತರಿಗೆ ಪರಿಹಾರ ನೀಡುವ ಕುರಿತು ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಬೆಂಗಳೂರಿನ ಅಧಿಕಾರಿಗಳು ಜೂ.3ರಂದು ಆಗಮಿಸಿ ಸರಕಾರದ ನಿಯಮಗಳನ್ನು ಗಾಳಿಗೆ ತೂರಿ ಪರ್ಕಳದ ಬಿಜೆಪಿ ನಾಯಕನ ಮನೆಯಲ್ಲಿ ಸಭೆ ನಡೆಸಿದ್ದಾರೆ ಎಂದು ಸ್ಥಳೀಯ ಕಾಂಗ್ರೆಸ್ ಮುಖಂಡರು ಆರೋಪಿಸಿದ್ದಾರೆ.
ಪರಿಹಾರಕ್ಕೆ ಸಂಬಂಧಿಸಿ ಭೂ ಸಂತ್ರಸ್ತರನ್ನು ಒಬ್ಬೊಬ್ಬರನ್ನಾಗಿ ಕರೆಸಿ ದಾಖಲೆ ಗಳನ್ನು ಪರಿಶೀಲಿಸಿದ್ದಾರೆ. ಬೆಂಗಳೂರಿನಿಂದ ಬಂದ ಅಧಿಕಾರಿಯು ಯಾರಿಗೂ ನೋಟಿಸ್ ನೀಡದೆಯೇ ಸಭೆ ನಡೆಸಿದ್ದಾರೆ. ಸ್ಥಳೀಯ ಅಧಿಕಾರಿಗಳಿಗೂ ಇದರ ಬಗ್ಗೆ ಮಾಹಿತಿಯೂ ಇಲ್ಲ. ಗುಪ್ತವಾಗಿ ಒಬ್ಬೊಬ್ಬರಾಗಿ ಜಾಗ ಕಳಕೊಂಡವರನ್ನು ಕರೆಯಿಸಿ ಅವರಲ್ಲಿ ಆಸೆ ಆಮಿಷವೊಡ್ಡಿ ಕಮಿಷನ್ ದಂಧೆ ನಡೆಸಿದ್ದಾರೆಯೇ ಎಂಬುದು ಸಂಶಯ ಮೂಡುತ್ತಿದೆ ಎಂದು ಪರ್ಕಳ ಕಾಂಗ್ರೆಸ್‌ನ ಮೋಹನ್ ದಾಸ್ ನಾಯಕ್, ಗಣೇಶ್‌ರಾಜ್ ಸರಳಬೆಟ್ಟು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕೆಳಪರ್ಕಳದಲ್ಲಿರುವ 13 ಮಂದಿ ಭೂಸಂತ್ರಸ್ತರಿಗೆ ಪರಿಹಾರ ನೀಡುವ ಕುರಿತು ಯಾವುದೇ ಕರೆಗಳು ಬಂದಿಲ್ಲ. ಡಿಸಿ, ಸಂಸದೆ, ಶಾಸಕರ ಜೊತೆಗೂಡಿ ಸಭೆ ಕರೆದು ಪರಿಹಾರದ ಹಣದ ನೀಡುವ ಬದಲು ಸರಕಾರದ ನಿಯಮವನ್ನು ಗಾಳಿಗೆ ತೂರಿ ಸಭೆ ನಡೆಸಲಾಗಿದೆ. ಇದಕ್ಕೆ ಬಿಜೆಪಿ ಸರಕಾರ ಹಾಗೂ ಜಿಲ್ಲಾಡಳಿತ ನೇರ ಹೊಣೆ ಆಗಿದೆ. ಜಿಲ್ಲಾಧಿಕಾರಿಗಳು ತಕ್ಷಣ ಪರ್ಕಳ ಸಂತ್ರಸ್ತರ ಸಭೆ ಕರೆದು ಪರಿಹಾರ ನೀಡಬೇಕು. ಬಿಜೆಪಿ ನಾಯಕನ ಮನೆಯಲ್ಲಿ ನಡೆದ ಸಭೆ ಅಸಿಂಧು ಎಂದು ಘೋಷಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.