ಬಾಂಗ್ಲಾ: ಕಂಟೈನರ್ ಡಿಪೋದಲ್ಲಿ ಸ್ಫೋಟ; ಕನಿಷ್ಟ 49 ಮಂದಿ ಮೃತ್ಯು, 300ಕ್ಕೂ ಅಧಿಕ ಮಂದಿಗೆ ಗಾಯ
ಢಾಕಾ, ಜೂ.5: ದಕ್ಷಿಣ ಬಾಂಗ್ಲಾದೇಶದಲ್ಲಿ ಕಂಟೈನರ್ ದಾಸ್ತಾನು ಕೇಂದ್ರದಲ್ಲಿ ಸಂಭವಿಸಿದ ಭೀಕರ ಸ್ಫೋಟದಲ್ಲಿ 49 ಮಂದಿ ಮೃತಪಟ್ಟಿದ್ದು 300ಕ್ಕೂ ಅಧಿಕ ಮಂದಿ ಗಾಯಗೊಂಡಿರುವುದಾಗಿ ಅಸೋಸಿಯೇಟೆಡ್ ಪ್ರೆಸ್ ರವಿವಾರ ವರದಿ ಮಾಡಿದೆ.
ಬಂದರು ನಗರ ಚಿತ್ತಗಾಂಗ್ ನಗರದ ಸಮೀಪದ ಸಿತಾಕುಂಡಲ್ಲಿರುವ ಬಿಎಂ ಇನ್ಲ್ಯಾಂಡ್ ಕಂಟೈನರ್ ಡಿಪೊದಲ್ಲಿ ಶನಿವಾರ ಮಧ್ಯರಾತ್ರಿ ವೇಳೆ ಕಾಣಿಸಿಕೊಂಡ ಬೆಂಕಿ ಕ್ಷಣಮಾತ್ರದಲ್ಲಿ 30 ಎಕರೆ ವ್ಯಾಪ್ತಿಯ ಡಿಪೋಕ್ಕೆ ಹರಡಿದೆ. ಇಲ್ಲಿ ರಾಸಾಯನಿಕ ವಸ್ತುಗಳ ಸರಕು ತುಂಬಿದ್ದ ಕಂಟೈನರ್ ಕೂಡಾ ಇದ್ದಕಾರಣ ಬೆಂಕಿ ತೀವ್ರಗತಿಯಲ್ಲಿ ಹರಡಿದ್ದು ಸರಣಿ ಸ್ಫೋಟ ಸಂಭವಿಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಮೃತರ ಸಂಖ್ಯೆ 49ಕ್ಕೆ ಏರಿದ್ದು 300ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ .
ಅಗ್ನಿಶಾಮಕ ಯಂತ್ರಗಳು ಬೆಂಕಿಯನ್ನು ನಿಯಂತ್ರಿಸುವ ಕಾರ್ಯದಲ್ಲಿ ತೊಡಗಿವೆ . ಮೃತರಲ್ಲಿ ಅಗ್ನಿಶಾಮಕ ದಳದ 6 ಸಿಬಂದಿಗಳೂ ಸೇರಿದ್ದಾರೆ ಎಂದು ಬಾಂಗ್ಲಾದೇಶದ ಅಗ್ನಿಶಾಮಕ ವಿಭಾಗದ ಹೇಳಿಕೆ ತಿಳಿಸಿದೆ. ಕನಿಷ್ಟ 21 ಅಗ್ನಿಶಾಮಕ ಸಿಬಂದಿ, 10 ಪೊಲೀಸ್ ಸಿಬಂದಿ ಸಹಿತ ಸುಮಾರು 170 ಮಂದಿ ಗಾಯಗೊಂಡಿದ್ದಾರೆ. ಗಾಯಗೊಂಡವರಲ್ಲಿ ಹಲವರ ಸ್ಥಿತಿ ಗಂಭೀರವಾಗಿದ್ದು ಮೃತರ ಸಂಖ್ಯೆ ಹೆಚ್ಚುವ ಸಾಧ್ಯತೆಯಿದೆ ಎಂದು ಸ್ಥಳೀಯ ಪೊಲೀಸ್ ಅಧಿಕಾರಿ ಕಲಾಂ ಆಝ ಹೇಳಿರುವುದಾಗಿ ಅಲ್ಜಝೀರಾ ವರದಿ ಮಾಡಿದೆ.
450ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದು ಕನಿಷ್ಟ 350 ಜನರನ್ನು ಚಿತ್ತಗಾಂಗ್ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ. ಇತರ ಆಸ್ಪತ್ರೆಗಳಿಗೂ ಗಾಯಾಳುಗಳನ್ನು ದಾಖಲಿಸಲಾಗಿದ್ದು ಮೃತರ ಸಂಖ್ಯೆ ಹೆಚ್ಚುವ ಸಾಧ್ಯತೆಯಿದೆ ಎಂದು ಚಿತ್ತಗಾಂಗ್ನ ರೆಡ್ಕ್ರೆಸೆಂಟ್ ಯೂತ್ ಸಂಸ್ಥೆ ಹೇಳಿರುವುದಾಗಿ ಸ್ಥಳೀಯ ಮಾಧ್ಯಮ ವರದಿ ಮಾಡಿದೆ.