1 ಮಿಲಿಯನ್ ಕಾರುಗಳನ್ನು ಹಿಂದಕ್ಕೆ ಪಡೆದ ಮರ್ಸಿಡಿಸ್: ಕಾರಣವೇನು ಗೊತ್ತೇ?
ಬರ್ಲಿನ್, ಜೂ.5: ಬ್ರೇಕಿಂಗ್ ವ್ಯವಸ್ಥೆಯಲ್ಲಿ ಸಮಸ್ಯೆಯ ಸಾಧ್ಯತೆಯ ಹಿನ್ನೆಲೆಯಲ್ಲಿ ಮರ್ಸಿಡಿಸ್-ಬೆಂಝ್ ನ ಹಳೆಯ ಮಾಡೆಲ್ ನ ಸುಮಾರು 1 ಮಿಲಿಯನ್ ಕಾರುಗಳನ್ನು ವಿಶ್ವದಾದ್ಯಂತ ಹಿಂಪಡೆಯಲಾಗುವುದು ಎಂದು ಜರ್ಮನಿಯ ಕಾರು ಉತ್ಪಾದನಾ ಸಂಸ್ಥೆ ಫೆಡರಲ್ ಟ್ರಾನ್ಸ್‌ಪೋರ್ಟ್ ಅಥಾರಿಟಿ ಹೇಳಿದೆ.
2004ರಿಂದ 2015ರ ಅವಧಿಯಲ್ಲಿ ತಯಾರಿಸಲಾದ ಎಸ್ಯುವಿ ಸರಣಿಯ ಎಂಎಲ್ ಮತ್ತು ಜಿಎಲ್ ಹಾಗೂ ಆರ್-ವರ್ಗದ ಐಷಾರಾಮಿ ಮಿನಿವ್ಯಾನ್ ಗಳಿಗೆ ಈ ನಿರ್ಧಾರ ಅನ್ವಯಿಸಲಿದೆ, ಬ್ರೇಕ್ ಬೂಸ್ಟರ್ ನಲ್ಲಿ ತುಕ್ಕು ಹಿಡಿದು ಕೆಟ್ಟ ಘಳಿಗೆಯಲ್ಲಿ ಬ್ರೇಕ್ ಪೆಡಲ್ ಮತ್ತು ಬ್ರೇಕ್ ವ್ಯವಸ್ಥೆಯ ನಡುವಿನ ಸಂಪರ್ಕಕ್ಕೆ ಅಡ್ಡಿಯಾಗಬಹುದು. ಪರಿಣಾಮವಾಗಿ ಬ್ರೇಕ್ ಕಾರ್ಯನಿರ್ವಹಿಸದೆ ಇರಬಹುದು . ಈ ಕಾರಣದಿಂದ ವಿಶ್ವದಾದ್ಯಂತ 9,93,407 ವಾಹನಗಳನ್ನು, ಜರ್ಮನಿಯಲ್ಲೇ 70,000 ವಾಹನಗಳು, ಹಿಂದಕ್ಕೆ ಪಡೆಯಲಾಗುವುದು ಎಂದು ಸಂಸ್ಥೆ ಹೇಳಿದೆ.
ಹಿಂಪಡೆಯುವ ಪ್ರಕ್ರಿಯೆ ತಕ್ಷಣದಿಂದಲೇ ಆರಂಭವಾಗಲಿದ್ದು ಸಂಭಾವ್ಯ ಸಮಸ್ಯೆಯ ವಾಹನಗಳ ಮಾಲಕರನ್ನು ಸಂಪರ್ಕಿಸಲಾಗುವುದು. ತಪಾಸಣೆಯ ಫಲಿತಾಂಶಗಳನ್ನು ಆಧರಿಸಿ ಅಗತ್ಯವಿರುವಲ್ಲಿ ಬಿಡಿಭಾಗಗಳನ್ನು ಬದಲಾಯಿಸಲಾಗುವುದು ಎಂದು ಹೇಳಿಕೆ ತಿಳಿಸಿದೆ.