ಶ್ರೀಲಂಕಾಕ್ಕೆ 2 ಟ್ರಕ್ ಲೋಡ್ ಔಷಧ ಸಾಮಗ್ರಿ ಒದಗಿಸಿದ ಭಾರತ
PHOTO: TWITTER/@IndiainSL
ಶ್ರೀಲಂಕಾ, ಜೂ.5: ಶ್ರೀಲಂಕಾ ಜನತೆಗೆ ನೆರವಿನ ಉಪಕ್ರಮವನ್ನು ಮುಂದುವರಿಸಿರುವ ಭಾರತ ಸರಕಾರ ಶನಿವಾರ ಜಾಫ್ನಾ ಟೀಚಿಂಗ್ ಹಾಸ್ಪಿಟಲ್(ಜೆಟಿಎಚ್)ಗೆ 2 ಟ್ರಕ್ಲೋಡ್ಗಳಷ್ಟು ಜೀವರಕ್ಷಕ ಔಷಧ ಮತ್ತು ಔಷಧ ಸಲಕರಣೆಗಳನ್ನು ಒದಗಿಸಿದೆ ಎಂದು ವರದಿಯಾಗಿದೆ.
ಜಾಫ್ನಾದಲ್ಲಿನ ಭಾರತೀಯ ಕಾನ್ಸುಲೇಟ್ ಜನರಲ್ ರಾಕೇಶ್ ನಟರಾಜ್ ಅವರು ಔಷಧ ಸಲಕರಣೆಗಳ ನೆರವನ್ನು ಜೆಟಿಎಚ್ನ ನಿರ್ದೇಶಕ ಡಾ.ನಂದಕುಮಾರ್ಗೆ ಸಾಂಕೇತಿಕವಾಗಿ ಹಸ್ತಾಂತರಿಸಿದರು. ಇದರಿಂದ ಔಷಧದ ಕೊರತೆಯಿದ್ದ ದ್ವೀಪರಾಷ್ಟ್ರದ ಉತ್ತರದ ಪ್ರಾಂತದಲ್ಲಿ ಸಾಮಾನ್ಯ ಮತ್ತು ನಿರ್ಣಾಯಕ ಆರೈಕೆಯನ್ನು ಖಚಿತಪಡಿಸಿದಂತಾಗಿದೆ.
ತನ್ನ ನೆರೆಹೊರೆ ಪ್ರಥಮ ಕಾರ್ಯನೀತಿಗೆ ಅನುಸಾರವಾಗಿ ಆರ್ಥಿಕ ಬಿಕ್ಕಟ್ಟಿನಲ್ಲಿರುವ ಶ್ರೀಲಂಕಾದ ನೆರವಿಗೆ ಧಾವಿಸಿರುವ ಭಾರತ ಶುಕ್ರವಾರ 3.3 ಟನ್ಗಳಷ್ಟು ಅಗತ್ಯ ಔಷಧ ಸಾಮಾಗ್ರಿಗಳನ್ನು ಒದಗಿಸಿದೆ. ಕೊಲಂಬೊದಲ್ಲಿ ಭಾರತದ ಹೈಕಮಿಷನರ್ ಗೋಪಾಲ್ ಬಾಗ್ಲೆ ಈ ನೆರವನ್ನು 1990 ಸುವಸೆರಿಯಾ ಆ್ಯಂಬುಲೆನ್ಸ್ ಸರ್ವಿಸ್ಗೆ ಹಸ್ತಾಂತರಿಸಿದರು. ಮಾರ್ಚ್ನಲ್ಲಿ ಕೊಲಂಬೊದಲ್ಲಿರುವ ಸುವಸೆರಿಯಾ ಪ್ರತಿಷ್ಠಾನದ ಕೇಂದ್ರ ಕಚೇರಿಗೆ ಭೇಟಿ ನೀಡಿದ್ದ ಭಾರತದ ವಿದೇಶಾಂಗ ಸಚಿವ ಎಸ್ ಜೈಶಂಕರ್ಗೆ ಪ್ರತಿಷ್ಠಾನ ಎದುರಿಸುತ್ತಿರುವ ಔಷಧ ಕೊರತೆಯ ಬಗ್ಗೆ ಮಾಹಿತಿ ನೀಡಲಾಗಿತ್ತು ಎಂದು ಬಾಗ್ಲೆ ಹೇಳಿದ್ದಾರೆ. ಔಷಧ ಸಾಮಾಗ್ರಿಗಳನ್ನು ತುರ್ತಾಗಿ ತಲುಪಿಸಲು ಭಾರತ ನೌಕಾಪಡೆಯ ಐಎನ್ಎಸ್ ಘರಿಯಾಲ್ ನೌಕೆಯನ್ನು ವಿಶೇಷವಾಗಿ ನಿಯೋಜಿಸಲಾಗಿತ್ತು ಎಂದವರು ಹೇಳಿದ್ದಾರೆ.
ಆರ್ಥಿಕ ಬಿಕ್ಕಟ್ಟು, ಹಣದುಬ್ಬರ, ದೈನಂದಿನ ಬಳಕೆಯ ವಸ್ತುಗಳ ತೀವ್ರ ಕೊರತೆ, ವಿದೇಶಿ ವಿನಿಮಯದ ಕೊರತೆ , ಹೀಗೆ ಸರಣಿ ಸಮಸ್ಯೆ ಎದುರಿಸುತ್ತಿರುವ ಶ್ರೀಲಂಕಾದ ನೆರವಿಗೆ ಧಾವಿಸಿರುವ ಭಾರತ ಮೂಲ ಉತ್ಪನ್ನಗಳನ್ನೂ ಒದಗಿಸುತ್ತಿದೆ. ಮೇ 27ರಂದು ಭಾರತ 25 ಟನ್ಗೂ ಅಧಿಕ ಔಷಧವನ್ನು ರವಾನಿಸಿತ್ತು. ಸುಮಾರು 260 ಮಿಲಿಯನ್ ರೂ. ಮೌಲ್ಯದ ಈ ನೆರವಿನ ಪ್ರಯತ್ನವು ಪ್ರಧಾನಿ ನರೇಂದ್ರ ಮೋದಿಯವರ ನೆರೆಹೊರೆ ಪ್ರಥಮ ಎಂಬ ನೀತಿಗೆ ಅನುಗುಣವಾಗಿದ್ದು ಇದು ಜನತೆಯ ನಡುವಿನ ಸಹಭಾಗಿತ್ವವನ್ನು ಸದೃಢಗೊಳಿಸಿದೆ. ಶ್ರೀಲಂಕಾದ ತಮ್ಮ ಸಹೋದರ ಸಹೋದರಿಯರಿಗೆ ಭಾರತದ ಜನತೆ ನೀಡುತ್ತಿರುವ ಉದಾರ ಕೊಡುಗೆ ಇದಕ್ಕೆ ಪೂರಕವಾಗಿದೆ ಎಂದು ಭಾರತದ ಹೈಕಮಿಷನ್ ಟ್ವೀಟ್ ಮಾಡಿದೆ.
Medical supplies from #India goes on across #SriLanka. https://t.co/NcaYtS2xcn
— India in Sri Lanka (@IndiainSL) June 5, 2022